
ಕುಂದಗೋಳ: ಪಟ್ಟಣದ ಐತಿಹಾಸಿಕ ಪಂಚಗ್ರಹ ಹಿರೇಮಠವು 1517ರಲ್ಲಿ ಸ್ಥಾಪಿತವಾದ ಪುತ್ರವರ್ಗ ಮಠವಾಗಿದ್ದು, ಇದರ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ಮೇಲೆ ಮಠದ ಪರಂಪರೆಯ ಜಂಗಮ ವಂಶಸ್ಥರಿಗೆ ಮಾತ್ರ ಸಂಪೂರ್ಣ ಹಕ್ಕಿದೆ. ಇದನ್ನು ಪ್ರಶ್ನಿಸಿ ಸಾರ್ವಜನಿಕರು ಸಲ್ಲಿಸಿರುವ ಮನವಿಯನ್ನು ಜಿಲ್ಲಾಧಿಕಾರಿಗಳು ಪುರಸ್ಕರಿಸಬಾರದು ಎಂದು ಪಂಚಗ್ರಹ ಹಿರೇಮಠದ ಶ್ರೀ ಶಿತಿಕಂಠೇಶ್ವರ ಸ್ವಾಮೀಜಿ ಆಗ್ರಹಿಸಿದರು.
ಶುಕ್ರವಾರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಮೇತ ಮಾತನಾಡಿದ ಅವರು, ಮಠದ ಆಸ್ತಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದರು. ಏಪ್ರಿಲ್ 22 ರಂದು ಜಿಲ್ಲಾಧಿಕಾರಿಗಳಿಗೆ ಪಟ್ಟಣದ ಕೆಲವರು ಸಲ್ಲಿಸಿರುವ ಮನವಿಯು ಸತ್ಯಕ್ಕೆ ದೂರವಾಗಿದೆ. ಮಠದ ಅಭಿವೃದ್ಧಿ ಹಾಗೂ ಸಾಮಾಜಿಕ ಕಾರ್ಯಗಳ ಹಿತದೃಷ್ಟಿಯಿಂದ ಕೈಗೊಳ್ಳುತ್ತಿರುವ ಕ್ರಮಗಳನ್ನು ತಡೆಯುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಿಸ್ವಾರ್ಥ ಸೇವೆಯ ಇತಿಹಾಸ:
“ನಾವು ಭಕ್ತರಿಂದ ಇಂದಿನವರೆಗೂ ಯಾವುದೇ ಕಾಣಿಕೆ ಸ್ವೀಕರಿಸಿಲ್ಲ. ಬದಲಾಗಿ, ಮಠದ ಸ್ವಂತ ಜಮೀನಿನಲ್ಲಿ ಈಗಾಗಲೇ ಸರಕಾರಿ ಪದವಿಪೂರ್ವ ಕಾಲೇಜಿಗೆ 1 ಎಕರೆ, ಪದವಿ ಕಾಲೇಜಿಗೆ 2 ಎಕರೆ, ಸನ್ ಶೈನ್ ಶಾಲೆಗೆ 1 ಎಕರೆ ಸೇರಿದಂತೆ ರುದ್ರಭೂಮಿ ಹಾಗೂ ಸಾಮಾಜಿಕ ಕಾರ್ಯಗಳಿಗಾಗಿ ಒಟ್ಟು 7 ಎಕರೆಗೂ ಹೆಚ್ಚು ಭೂಮಿಯನ್ನು ದಾನವಾಗಿ ನೀಡಿದ್ದೇವೆ. ಪ್ರತಿ ವರ್ಷ ಸ್ವಂತ ಹಣದಿಂದ ರೈತರಿಗೆ ಬೀಜ-ಗೊಬ್ಬರ ವಿತರಿಸುವ ಮೂಲಕ ಕೃಷಿ ಕಾಯಕಕ್ಕೆ ಬೆನ್ನೆಲುಬಾಗಿ ನಿಂತಿದ್ದೇವೆ” ಎಂದು ಸ್ವಾಮೀಜಿ ತಮ್ಮ ಸಾಮಾಜಿಕ ಬದ್ಧತೆಯನ್ನು ನೆನಪಿಸಿದರು.
ಲೇಔಟ್ ನಿರ್ಮಾಣದ ಉದ್ದೇಶ:
ಪ್ರಸ್ತುತ ಮಠದ ಬಳಿಯಿರುವ 53 ಎಕರೆ ಜಮೀನು ಕೃಷಿಗೆ ಯೋಗ್ಯವಾಗಿಲ್ಲದ ಕಾರಣ, ಅದನ್ನು ಎನ್.ಎ (NA) ಪರಿವರ್ತನೆ ಮಾಡಿ ಪ್ಲಾಟುಗಳನ್ನಾಗಿ ಮಾಡಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಮಠದ ಜೀರ್ಣೋದ್ಧಾರ ಮಾಡುವುದಾಗಿದೆ. ಅಷ್ಟೇ ಅಲ್ಲದೆ, ಈ ಭಾಗದಲ್ಲಿ ಬಡವರಿಗಾಗಿ ಕಲ್ಯಾಣ ಮಂಟಪ, ಗೋಶಾಲೆ, ವೃದ್ಧಾಶ್ರಮ, ಉಚಿತ ವಿದ್ಯಾರ್ಥಿ ನಿಲಯ ಹಾಗೂ ಪತ್ರಕರ್ತರಿಗಾಗಿ ಭವನ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ. ಈ ಎಲ್ಲವೂ ಸಾರ್ವಜನಿಕ ಮತ್ತು ಧಾರ್ಮಿಕ ಹಿತಾಸಕ್ತಿಯಿಂದಲೇ ಕೂಡಿದೆ ಎಂದು ಅವರು ವಿವರಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ:
ಪಂಚಗ್ರಹ ಹಿರೇಮಠವು ಜಂಗಮ ಪರಂಪರೆಯ ಸ್ವಂತ ಮಠವಾಗಿದ್ದು, ಇದು ಯಾವುದೇ ಸಾರ್ವಜನಿಕ ಟ್ರಸ್ಟ್ ಅಥವಾ ಇತರ ಪೀಠಾಧಿಪತಿಗಳಿಗೆ ಸಂಬಂಧಿಸಿದ್ದಲ್ಲ. ಇಲ್ಲಿ ಬೇರೆಯವರನ್ನು ನೇಮಕ ಮಾಡಲು ಯಾರಿಗೂ ಅಧಿಕಾರವಿಲ್ಲ. ಆದ್ದರಿಂದ, ಪಟ್ಟಣದ ಕೆಲವರು ವಿನಾಕಾರಣ ನೀಡುತ್ತಿರುವ ದೂರುಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಸಭಾಪತಿಯವರು ಪರಿಗಣಿಸಬಾರದು. ಎನ್.ಎ ಪ್ರಕ್ರಿಯೆಗೆ ಅಡ್ಡಿಪಡಿಸದೆ, ಅಭಿವೃದ್ಧಿ ಕಾರ್ಯಗಳಿಗೆ ಅನುವು ಮಾಡಿಕೊಡಬೇಕು ಎಂದು ಶ್ರೀ ಶಿತಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪತ್ರಿಕಾಗೋಷ್ಠಿಯ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.

