ನವಲಗುಂದ:ದಾಖಲೆ ನೀಡುವ ‘ದಣಿ’ಗೇ ಇಲ್ಲ ದಾಖಲೆ: ಪುರಸಭೆ ಅತಿಕ್ರಮಣ ಬಯಲು, ಲೋಕಾಯುಕ್ತ ಮೆಟ್ಟಿಲೇರಿದ ಪ್ರಕರಣ

Spread the love

ನವಲಗುಂದ: ಸಾರ್ವಜನಿಕರ ಮನೆಗಳಿಗೆ ಸಣ್ಣ ದಾಖಲೆ ತಪ್ಪಾದರೂ ಅದು ಅಕ್ರಮ ಎಂದು ದಂಡ ವಿಧಿಸಿ ಜಪ್ತಿ ಮಾಡುವ ನವಲಗುಂದ ಪುರಸಭೆಯು, ತಾನು ಕಾರ್ಯಾಲಯ ನಡೆಸುತ್ತಿರುವ ಜಾಗಕ್ಕೆ ಯಾವುದೇ ಅಧಿಕೃತ ದಾಖಲೆ ಹೊಂದಿಲ್ಲ ಎಂಬ ಆಘಾತಕಾರಿ ಅಂಶ ಇದೀಗ ಬಯಲಾಗಿದೆ. ಈ ಸಂಬಂಧ ಪುರಸಭೆಯ ಆಡಳಿತಾತ್ಮಕ ವೈಫಲ್ಯ ಮತ್ತು ಅಧಿಕಾರ ದುರ್ಬಳಕೆಯನ್ನು ಖಂಡಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಾಬುಸಾಬ ಯರಗುಪ್ಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

​ಸಾರ್ವಜನಿಕರಿಗೆ ಆಸ್ತಿಗಳ ಇ-ಸ್ವತ್ತು ಉತಾರ ನೀಡುವ ಕೇಂದ್ರವೇ ಆಗಿರುವ ಪುರಸಭೆ ಕಾರ್ಯಾಲಯವು ಸಿ.ಟಿ.ಎಸ್ ನಂ. 1458 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಆಶ್ಚರ್ಯಕರ ಸಂಗತಿಯೆಂದರೆ ಈ ಜಾಗಕ್ಕೆ ಪುರಸಭೆಯ ಹೆಸರಿನಲ್ಲಿ ಯಾವುದೇ ಉತಾರ ಅಥವಾ ಆಸ್ತಿ ಕಾರ್ಡ್ ಲಭ್ಯವಿಲ್ಲ. ಜನರ ಆಸ್ತಿಗಳ ಕಾನೂನುಬದ್ಧತೆಯನ್ನು ನಿರ್ಧರಿಸುವ ಈ ಸಂಸ್ಥೆಯು, ತಾನೇ ದಾಖಲೆಗಳಿಲ್ಲದೆ ‘ಅಕ್ರಮ’ವಾಗಿ ಕಾರ್ಯಾಲಯ ನಡೆಸುತ್ತಿರುವುದು ಆಡಳಿತದ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಆರೋಗ್ಯ ಇಲಾಖೆಯ ಜಾಗ ಕಬಳಿಕೆ ಆರೋಪ:

ಮೂಲ ದಾಖಲೆಗಳ ಪ್ರಕಾರ ಪುರಸಭೆ ಕಚೇರಿ ಇರುವ ಜಾಗವು ವಾಸ್ತವವಾಗಿ ಆರೋಗ್ಯ ಇಲಾಖೆಗೆ ಸೇರಿದ ಸರ್ಕಾರಿ ಆಸ್ಪತ್ರೆಯ ಜಾಗವಾಗಿದೆ. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ನೀಡಬೇಕಾದ ಜಾಗವನ್ನು ಪುರಸಭೆಯು ಅನಧಿಕೃತವಾಗಿ ಬಳಸಿಕೊಳ್ಳುತ್ತಿದೆ. ಈ ಗಂಭೀರ ಕರ್ತವ್ಯ ಲೋಪದ ವಿರುದ್ಧ ಮಾಬುಸಾಬ ಯರಗುಪ್ಪಿ ನೀಡಿದ ದೂರನ್ನು (ಸಂಖ್ಯೆ: ಕಂಪ್ಲೇಟ್/ಉಪಲೋಕ್/ಬಿಜಿಎಮ್/1990/2026) ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತವು, ಮುಖ್ಯಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.

​”ಸಾಮಾನ್ಯ ಜನರಿಗೆ ಒಂದು ದಾಖಲೆ ಕಡಿಮೆ ಇದ್ದರೂ ಹತ್ತಾರು ಬಾರಿ ಅಲೆದಾಡಿಸುವ ಅಧಿಕಾರಿಗಳಿಗೆ, ತಮ್ಮದೇ ಕಚೇರಿಗೆ ದಾಖಲೆ ಇಲ್ಲ ಎಂಬುದು ತಿಳಿದಿಲ್ಲವೇ? ಇದು ಸಾರ್ವಜನಿಕರ ನಂಬಿಕೆಗೆ ಎಸಗಿದ ದ್ರೋಹವಾಗಿದೆ” ಎಂದು ಮಾಬುಸಾಬ ಯರಗುಪ್ಪಿ ಗುಡುಗಿದ್ದಾರೆ. ಕೂಡಲೇ ಆರೋಗ್ಯ ಇಲಾಖೆಯ ಈ ಜಾಗವನ್ನು ಕಾನೂನುಬದ್ಧವಾಗಿ ಪುರಸಭೆಯ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಬೇಕು ಮತ್ತು ಇಷ್ಟು ವರ್ಷಗಳ ಕಾಲ ದಾಖಲೆ ನಿರ್ವಹಣೆಯಲ್ಲಿ ಘೋರ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

​ಸಾರ್ವಜನಿಕರ ತೆರಿಗೆ ಹಣದಲ್ಲಿ ನಡೆಯುವ ಆಡಳಿತವು ಇಷ್ಟು ದೊಡ್ಡ ಮಟ್ಟದ ನಿಯಮ ಉಲ್ಲಂಘನೆ ಮಾಡುತ್ತಿರುವುದು ಈಗ ಪಟ್ಟಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಧಿಕಾರಿಗಳ ನಡೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Leave a Reply

Your email address will not be published. Required fields are marked *