
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧಾರವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 17 ಮಂದಿಯನ್ನು ನ್ಯಾಯಾಲಯವು ದೋಷಿಗಳೆಂದು ಘೋಷಿಸಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಬುಧವಾರ ಸಂಜೆ ಈ ತೀರ್ಪು ಪ್ರಕಟಿಸಿದ್ದು, ದೋಷಿಗಳನ್ನು ತಕ್ಷಣವೇ ವಶಕ್ಕೆ ಪಡೆಯುವಂತೆ ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 19 ಮಂದಿಯ ವಿರುದ್ಧ ಆರೋಪಗಳು ಕೇಳಿಬಂದಿದ್ದವು. ಅಂತಿಮವಾಗಿ 17 ಮಂದಿಯ ವಿರುದ್ಧ ದೋಷಾರೋಪಣೆ ಸಾಬೀತಾಗಿದ್ದು, ಉಳಿದ ಇಬ್ಬರನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಇಬ್ಬರನ್ನು ಮಾಫಿ ಸಾಕ್ಷಿಗಳೆಂದು ನ್ಯಾಯಾಲಯ ಪರಿಗಣಿಸಿದೆ. ಅಪರಾಧಿಗಳಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಏಪ್ರಿಲ್ 16ರಂದು ಪ್ರಕಟಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಆರೋಪಿಗಳ ವಿರುದ್ಧ ಕೊಲೆ (ಸೆಕ್ಷನ್ 302), ಅಪರಾಧಿಕ ಸಂಚು (120B), ಸಾಕ್ಷ್ಯ ನಾಶ (201) ಹಾಗೂ ಮಾರಕಾಸ್ತ್ರಗಳಿಂದ ಗಲಭೆ (148) ಸೇರಿದಂತೆ ವಿವಿಧ ಗಂಭೀರ ಕಲಂಗಳಡಿ ಪ್ರಕರಣ ದಾಖಲಾಗಿರುವ ಸಂಶಯವಿದ್ದು, ಮುಂದಿನ ಕ್ರಮ ನಾಳೆ ಕಾದು ನೋಡಬೇಕಿದೆ.
ಪ್ರಕರಣದ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ, ವಿಚಾರಣಾ ಸಮಯದಲ್ಲಿ ಸುಳ್ಳು ಸಾಕ್ಷಿ ನೀಡಿದವರ ವಿರುದ್ಧವೂ ನ್ಯಾಯಾಲಯ ಕಠಿಣ ನಿಲುವು ತಳೆದಿದೆ. ಪೊಲೀಸ್ ಅಧಿಕಾರಿ ಶಿವಾನಂದ ಚಲವಾದಿ ಸೇರಿದಂತೆ ಬಾಬು ಕಟಗಿ, ಶಂಕರ್ಗೌಡ ಪಾಟೀಲ್, ಡಾ. ದತ್ತಾತ್ರೇಯ ಗುಡಗಂಟಿ ಹಾಗೂ ವಿಜಯ್ ಕುಲಕರ್ಣಿ ಸೇರಿದಂತೆ ಒಟ್ಟು 10 ಜನರ ವಿರುದ್ಧ ಸುಳ್ಳು ಸಾಕ್ಷಿ ನೀಡಿದ ಆರೋಪದಡಿ ಕಾನೂನು ಕ್ರಮ ಜರುಗಿಸಲು ನ್ಯಾಯಾಲಯ ಸೂಚಿಸಿದೆ. ಈ ಸಂಬಂಧ ಸಿಟಿ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್ ಅವರು ಅಧಿಕೃತ ದೂರು ದಾಖಲಿಸಲಿದ್ದಾರೆ. ಸಿಬಿಐ ಪರವಾಗಿ ಪ್ರಾಸಿಕ್ಯೂಟರ್ ಕೆ.ಎಸ್. ಹೇಮಾ ಹಾಗೂ ಶಿವಾನಂದ ಪೆರ್ಲಾ ಅವರು ಸುದೀರ್ಘ ವಾದ ಮಂಡಿಸಿದ್ದರು.
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದಲ್ಲಿರುವ ಉದಯ್ ಜಿಮ್‌ನಲ್ಲಿ ಯೋಗೀಶಗೌಡ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಆರಂಭದಲ್ಲಿ ಧಾರವಾಡ ಪೊಲೀಸರು ತನಿಖೆ ನಡೆಸಿ ಆಸ್ತಿ ವಿವಾದ ಎಂದು ದೋಷಾರೋಪಪಟ್ಟಿ ಸಲ್ಲಿಸಿದ್ದರು. ಆದರೆ, ಮೃತರ ಕುಟುಂಬದ ಒತ್ತಾಯ ಹಾಗೂ ರಾಜಕೀಯ ಪ್ರಭಾವದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ 2019ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ರಾಜಕೀಯ ದ್ವೇಷವೇ ಈ ಕೊಲೆಗೆ ಕಾರಣ ಎಂದು ಸಿಬಿಐ ತನ್ನ ತನಿಖೆಯಲ್ಲಿ ಸಾಬೀತುಪಡಿಸಿತ್ತು. ಸುಮಾರು 10 ವರ್ಷಗಳ ಬಳಿಕ ಹೊರಬಂದಿರುವ ಈ ತೀರ್ಪು ಕಾನೂನು ಮತ್ತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

