ಪ್ರೀತಿ ನಿರಾಕರಿಸಿದ್ದಕ್ಕೆ ನಡುರಸ್ತೆಯಲ್ಲೇ ಯುವತಿಗೆ ಚಾಕು ಇರಿತ: ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಹೋರಾಡಿ ಲಾ ವಿದ್ಯಾರ್ಥಿನಿ ಸಾವು!

Spread the love

ಬೆಂಗಳೂರು: ಪ್ರೀತಿಯನ್ನು ನಿರಾಕರಿಸಿದಳು ಎಂಬ ಒಂದೇ ಒಂದು ಕಾರಣಕ್ಕಾಗಿ ಯುವತಿಯೊಬ್ಬಳಿಗೆ ನಡುರಸ್ತೆಯಲ್ಲೇ ಚಾಕುವಿನಿಂದ ಮನಬಂದಂತೆ ಇರಿದು ಕ್ರೂರವಾಗಿ ಕೊಲೆ ಮಾಡಿರುವ ಭೀಕರ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಚಾಕು ಇರಿತಕ್ಕೊಳಗಾಗಿ ತೀವ್ರ ರಕ್ತಸ್ರಾವದಿಂದ ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕಾನೂನು (ಲಾ) ವಿದ್ಯಾರ್ಥಿನಿ ಅಮೃತಾ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತ ಯುವತಿಯು ಕಾನೂನು ವ್ಯಾಸಂಗ ಮಾಡುವ ಜೊತೆಗೆ ತನ್ನ ಸ್ವಾವಲಂಬಿ ಬದುಕಿಗಾಗಿ ಪಿಜ್ಜಾ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಯುವತಿಯ ಈ ಧಾರುಣ ಸಾವು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮದುವೆ ಮತ್ತು ಮಗುವಿನ ಸತ್ಯ ಮುಚ್ಚಿಟ್ಟಿದ್ದಕ್ಕೆ ದೂರವಾಗಿದ್ದ ಯುವತಿ

ಮೃತ ಅಮೃತಾ ಹಾಗೂ ಆರೋಪಿಗಳಾದ ಧನುಷ್ ಮತ್ತು ಸೂರ್ಯ ಇಬ್ಬರೂ ಸಹೋದರರಾಗಿದ್ದು, ಬೆಂಗಳೂರಿನ ಎಚ್‌ಎಎಲ್ ರಸ್ತೆಯ ಕೋಡಿಹಳ್ಳಿಯ ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ಕೆಲವು ಸಮಯದ ಹಿಂದೆ ಓಂ ಶಕ್ತಿ ಮಾಲೆ ಹಾಕುವ ಸಂದರ್ಭದಲ್ಲಿ ಈ ಎರಡು ಕುಟುಂಬಗಳ ನಡುವೆ ಪರಿಚಯ ಬೆಳೆದಿತ್ತು. ಇದೇ ಪರಿಚಯದ ಹಿನ್ನೆಲೆಯಲ್ಲಿ ಧನುಷ್ ಮತ್ತು ಅಮೃತಾ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು.

ಆದರೆ, ಧನುಷ್ ತನಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಆಗಿರುವ ಮತ್ತು ಒಂದು ಮಗುವಿರುವ ಕಹಿ ಸತ್ಯವನ್ನು ಅಮೃತಾಳಿಂದ ಮುಚ್ಚಿಟ್ಟಿದ್ದ. ಈ ವಂಚನೆಯ ವಿಚಾರ ಗೊತ್ತಾಗುತ್ತಿದ್ದಂತೆಯೇ ತೀವ್ರವಾಗಿ ನೊಂದ ಅಮೃತಾ, ಧನುಷ್‌ನಿಂದ ಸಂಪೂರ್ಣವಾಗಿ ದೂರವಾಗಲು ನಿರ್ಧರಿಸಿ ಆತನ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದರು.

ಅಣ್ಣನ ಪ್ರೀತಿ ತಿರಸ್ಕರಿಸಿದ್ದಕ್ಕೆ ರಸ್ತೆಯಲ್ಲೇ ತಮ್ಮನ ಅಟ್ಟಹಾಸ

ತನ್ನ ಅಣ್ಣನ ಪ್ರೀತಿಯನ್ನು ನಿರಾಕರಿಸಿ ದೂರ ಸರಿದ ಅಮೃತಾ ನಡೆಗೆ ಧನುಷ್‌ನ ತಮ್ಮ ಸೂರ್ಯ ತೀವ್ರ ಹಗೆ ಸಾಧಿಸಿದ್ದನು. “ನನ್ನ ಅಣ್ಣನ ಪ್ರೀತಿಯನ್ನು ನಿರಾಕರಿಸಿದ ನಿನ್ನನ್ನು ಬದುಕಲು ಬಿಡುವುದಿಲ್ಲ” ಎಂದು ಆಕ್ರೋಶಗೊಂಡಿದ್ದ ಸೂರ್ಯ, ಕಳೆದ ಜುಲೈ 13ರ ಸಂಜೆ ಅಮೃತಾ ಅವರ ಮನೆ ಬಳಿ ತೆರಳಿ ಜಗಳ ತೆಗೆದಿದ್ದಾನೆ.

ಈ ಗಲಾಟೆಯು ವಿಕೋಪಕ್ಕೆ ತಿರುಗಿದಾಗ ಸೂರ್ಯ ತನ್ನ ಬಳಿಯಿದ್ದ ಚಾಕುವಿನಿಂದ ಅಮೃತಾ ಅವರ ಬೆನ್ನು ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಇರಿದು ರಕ್ತದ ಮಡುವಿನಲ್ಲಿ ಬೀಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲೇ ಒದ್ದಾಡುತ್ತಿದ್ದ ಯುವತಿಯನ್ನು ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದ ಯುವತಿ ಜುಲೈ 15ರ ಸಂಜೆ ಸಾವನ್ನಪ್ಪಿದ್ದಾರೆ.

ಆರೋಪಿಗಳನ್ನು ಕಂಬಿ ಹಿಂದೆ ತಳ್ಳಿದ ಜೀವನ್‌ಭೀಮಾನಗರ ಪೊಲೀಸರು

ಕಾನೂನು ವಿದ್ಯಾರ್ಥಿನಿಯ ಕೊಲೆಗೆ ಸಂಬಂಧಿಸಿದಂತೆ ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಯುವತಿಯ ಪ್ರಿಯಕರ ಎನ್ನಲಾದ ಧನುಷ್ ಹಾಗೂ ಚಾಕು ಇರಿದ ಆತನ ಸೋದರ ಸೂರ್ಯ ವಿರುದ್ಧ ಜೀವನ್‌ಭೀಮಾನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ತನಿಖೆ ನಡೆಸಿ, ಕೊಲೆ ಕೃತ್ಯ ಎಸಗಿದ ಸೂರ್ಯ ಹಾಗೂ ಆತನ ಅಣ್ಣ ಧನುಷ್ ಇಬ್ಬರನ್ನೂ ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಸುಂದರ ಭವಿಷ್ಯ ಹೊಂದಿದ್ದ ಭರವಸೆಯ ಕಾನೂನು ವಿದ್ಯಾರ್ಥಿನಿಯೊಬ್ಬಳ ಬದುಕು ಪ್ರೀತಿಯ ಹೆಸರಿನಲ್ಲಿ ಹೀಗೆ ಕ್ರೂರವಾಗಿ ನಡುರಸ್ತೆಯಲ್ಲೇ ಕೊನೆಯಾಗಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.

Leave a Reply

Your email address will not be published. Required fields are marked *