ರೈತರ ಹಿತಾಸಕ್ತಿ ನಮ್ಮ ಸರ್ಕಾರದ ಆದ್ಯತೆ; ಎಂಎಸ್‌ಪಿ ಅಡಿ ಧಾನ್ಯ ಖರೀದಿ ಹಾಗೂ ಬಾಕಿ ಪಾವತಿಗೆ ಕ್ರಮ: ಸಿ ಎಂ, ಡಿ.ಕೆ. ಶಿವಕುಮಾರ

Spread the love

ಬೆಂಗಳೂರು: ರಾಜ್ಯದ ರೈತರ ಹಿತರಕ್ಷಣೆ ಮತ್ತು ಆರ್ಥಿಕ ಭದ್ರತೆಯೇ ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ 2025–26ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರಾಗಿ, ಜೋಳ ಮತ್ತು ಭತ್ತ ಸೇರಿದಂತೆ ಒಟ್ಟು 7.96 ಲಕ್ಷ ಮೆಟ್ರಿಕ್ ಟನ್ ಧಾನ್ಯವನ್ನು ಸುಮಾರು 2.89 ಲಕ್ಷ ರೈತರಿಂದ ಖರೀದಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿವಿಧ ವರ್ಷಗಳ ಕ್ಲೈಮ್‌ಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆಯಾಗಬೇಕಿರುವ ಒಟ್ಟು ₹1,902 ಕೋಟಿ ಅನುದಾನ ಇನ್ನೂ ಬಾಕಿಯಿದ್ದು, ಅದನ್ನು ಶೀಘ್ರವಾಗಿ ಪಡೆಯಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ ಮರುಪಾವತಿ ವಿಳಂಬವಾಗುತ್ತಿದ್ದರೂ, ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ತನ್ನ ಆವರ್ತ ನಿಧಿ (Revolving Fund)ಯಿಂದ 2026ರ ಜೂನ್ 15ರಂದು ₹650 ಕೋಟಿ ಬಿಡುಗಡೆ ಮಾಡಿ ರೈತರಿಗೆ ಪಾವತಿ ಮಾಡಿದೆ. ಅಲ್ಲದೆ, ಉಳಿದ ಬಾಕಿ ಮೊತ್ತವನ್ನು ಪಾವತಿಸುವ ಉದ್ದೇಶದಿಂದ ಹಣಕಾಸು ಇಲಾಖೆಯ ನಿಯಮಾವಳಿಗಳಿಗೆ ಅನುಗುಣವಾಗಿ 2026ರ ಜುಲೈ 4ರಂದು ಮತ್ತಷ್ಟು ₹600 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಇದರ ಜೊತೆಗೆ, 2026–27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೆಸರುಕಾಳು, ಉದ್ದು ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯವಿರುವ ₹990 ಕೋಟಿ ಅನುದಾನದ ಕುರಿತು ಮುಂದಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ರೈತರ ಹಿತಾಸಕ್ತಿ, ಆರ್ಥಿಕ ಭದ್ರತೆ ಹಾಗೂ ಕೃಷಿ ಕ್ಷೇತ್ರದ ಸದೃಢ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸದಾ ಬದ್ಧವಾಗಿದ್ದು, ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ.

Leave a Reply

Your email address will not be published. Required fields are marked *