ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ: ತೀವ್ರ ಕಳವಳ ವ್ಯಕ್ತಪಡಿಸಿದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ

Spread the love

ಬೆಂಗಳೂರು: ಹುಬ್ಬಳ್ಳಿಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ವಿದ್ಯಾ ಮಂಜುನಾಥ ಗೌಡರ್ ಅವರ ಕುತ್ತಿಗೆಗೆ ಅಪಾಯಕಾರಿ ಮಾಂಜಾ ದಾರ ಸಿಲುಕಿ, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ದಾರುಣ ಘಟನೆಗೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಅಮಾಯಕ ಜೀವವೊಂದನ್ನು ಬಲಿಪಡೆದ ಈ ಘಟನೆ ನೋವು ಮತ್ತು ಆತಂಕವನ್ನುಂಟು ಮಾಡಿದೆ. ಇಂತಹ ಅಪಾಯಕಾರಿ ಪ್ರವೃತ್ತಿಗೆ ಸಕಾಲದಲ್ಲಿ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಮೂಲ್ಯ ಜೀವಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ಮೇಲೆ ನಿಷೇಧ ಜಾರಿಯಲ್ಲಿದ್ದರೂ, ಇಂತಹ ಘಟನೆಗಳು ನಡೆಯುತ್ತಿರುವುದು ಗಂಭೀರ ವಿಚಾರವಾಗಿದೆ. ನಿಷೇಧವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದ್ದು, ಈ ಕುರಿತು ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.

ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಜೊತೆಗೆ, ಅಗತ್ಯವಿದ್ದಲ್ಲಿ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿ, ಅಪಾಯಕಾರಿ ಮಾಂಜಾ ದಾರ ಮಾರಾಟ ಮಾಡುವವರು ಹಾಗೂ ಅದನ್ನು ಬಳಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.

ಕೆಲವರ ಕ್ಷಣಿಕ ಮನೋರಂಜನೆ ಅಥವಾ ಮೋಜಿಗಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಗಾಳಿಪಟ ಹಾರಿಸುವ ಹವ್ಯಾಸ ಮತ್ತೊಬ್ಬರ ಬದುಕನ್ನೇ ಕಸಿದುಕೊಳ್ಳುವ ಅಪಾಯಕಾರಿ ಚಟುವಟಿಕೆಯಾಗಿ ಪರಿಣಮಿಸಬಾರದು. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುವ ಇಂತಹ ಪ್ರವೃತ್ತಿಗೆ ಕಡಿವಾಣ ಹಾಕುವುದು ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಮರುಕಳಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಅಪಾಯದ ಅರಿವಿದ್ದರೂ ಇಂತಹ ದಾರಗಳನ್ನು ಬಳಸುವವರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಮತ್ತೊಬ್ಬರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ವರ್ತಿಸುವುದು ಕೇವಲ ನಿರ್ಲಕ್ಷ್ಯವಲ್ಲ, ಅದು ಕಾನೂನು ಕ್ರಮಕ್ಕೆ ಕಾರಣವಾಗಬಹುದಾದ ಕೃತ್ಯವಾಗಿದೆ ಎಂದು ಡಾ. ಜಿ. ಪರಮೇಶ್ವರ ಎಚ್ಚರಿಸಿದ್ದಾರೆ.

ಗಾಳಿಪಟ ಹಾರಿಸುವುದು ಮನೋರಂಜನೆಯಾಗಿರಬೇಕೇ ಹೊರತು ಮತ್ತೊಬ್ಬರ ಜೀವಕ್ಕೆ ಕುತ್ತು ತರುವ ಚಟುವಟಿಕೆಯಾಗಬಾರದು. ಮನುಷ್ಯನ ಜೀವಕ್ಕಿಂತ ದೊಡ್ಡ ಮನೋರಂಜನೆ ಯಾವುದೂ ಇಲ್ಲ. ಹುಬ್ಬಳ್ಳಿಯಲ್ಲಿ ನಡೆದಿರುವ ಈ ದುರಂತ ಮತ್ತೊಮ್ಮೆ ಅಪಾಯಕಾರಿ ಮಾಂಜಾ ದಾರದ ಬಳಕೆಯ ಗಂಭೀರತೆಯನ್ನು ಎತ್ತಿತೋರಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *