
ತುಮಕೂರು (ಕುಣಿಗಲ್): “ಹೆಣ್ಣಿನ ನೆಲೆ, ಕುದುರೆ ನೆಲೆ ಹಾಗೂ ನೀರಿನ ನೆಲೆ ಯಾರಿಗೂ ತಿಳಿಯದು” ಎಂಬ ಹಿರಿಯರ ಮಾತು ಅಕ್ಷರಶಃ ಸತ್ಯ ಎಂಬಂತೆ ಕುಣಿಗಲ್‌ನಲ್ಲಿ ಒಂದು ಘೋರ ದುರಂತ ಸಂಭವಿಸಿದೆ. ತಾನು ಮಗನಂತೆ ಸಾಕಿ ಸಲಹಿದ ಅಕ್ಕನ ಮಗ ಹಾಗೂ ಜೀವವೇ ಎಂದು ನಂಬಿದ್ದ ಪತ್ನಿಯ ಕಪಟ ನಾಟಕಕ್ಕೆ ಸಿಲುಕಿದ ಶಿವಣ್ಣ ಎಂಬುವವರು, ತಮ್ಮ ಇಬ್ಬರು ಮುದ್ದಾದ ಮಕ್ಕಳನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಂಬಿಕೆಯ ಬೆನ್ನಿಗೆ ಚೂರಿ ಹಾಕಿದ ಪ್ರಿಯಕರ ಮತ್ತು ಪತ್ನಿಯ ಕೃತ್ಯಕ್ಕೆ ಒಂದು ಸುಂದರ ಸಂಸಾರವೇ ಸುಟ್ಟು ಬೂದಿಯಾಗಿದೆ.ಶಿವಣ್ಣ ಅವರು ತಮ್ಮ ಅಕ್ಕ ಮೃತಪಟ್ಟಾಗ ಅನಾಥನಾಗಿದ್ದ ಆಕೆಯ ಮಗ ಹೇಮಂತನನ್ನು ಮಗನಿಗಿಂತ ಮಿಗಿಲಾಗಿ ಪ್ರೀತಿಸಿ ಆಶ್ರಯ ನೀಡಿದ್ದರು. ಆದರೆ ಹೇಮಂತನ ಮನಸ್ಸಿನ ಕರಾಳ ನೆಲೆ ಶಿವಣ್ಣನಿಗೆ ಅರಿವಾಗಿರಲಿಲ್ಲ. ಬೆಳೆದು ದೊಡ್ಡವನಾದಂತೆ ತನಗೆ ಅನ್ನ ನೀಡಿದ ಮಾವನ ಪತ್ನಿ ಕಾವ್ಯ ಜೊತೆ ಅಕ್ರಮ ಸಂಬಂಧ ಬೆಳೆಸಿ, ಆ ಮನೆಯ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದಾನೆ. ಈ ವಿಚಾರ ತಿಳಿದು ಮನನೊಂದಿದ್ದ ಶಿವಣ್ಣನಿಗೆ ಗ್ರಾಮಸ್ಥರು ಸಮಾಧಾನ ಹೇಳಿ ದಾಂಪತ್ಯ ಉಳಿಸಲು ಪ್ರಯತ್ನಿಸಿದ್ದರು. ಆದರೆ ಕಾವ್ಯಳ ಮನದ ಆಳದ ಕುತಂತ್ರ ಯಾರಿಗೂ ಎಟುಕಲಿಲ್ಲ.

ಕಳೆದ ವಾರ ಪ್ರಿಯಕರನೊಂದಿಗೆ ಓಡಿಹೋಗಿದ್ದ ಕಾವ್ಯ, ಪೊಲೀಸರ ಮುಂದೆ ತಾನು ತಪ್ಪು ಮಾಡಿದೆ ಎಂದು ಕ್ಷಮೆ ಕೇಳುವ ನಾಟಕವಾಡಿ ಮನೆಗೆ ಮರಳಿದ್ದಳು. ಈಕೆಯ ಮಾತಿನ ಜಾಲವನ್ನು ನಂಬಿದ ಶಿವಣ್ಣ ಪತ್ನಿಯನ್ನು ಒಪ್ಪಿಕೊಂಡಿದ್ದರು. ಆದರೆ ಆಕೆ ಮರಳಿದ್ದು ಸಂಸಾರಕ್ಕಲ್ಲ, ದರೋಡೆಗೆ! ಮನೆಗೆ ಬಂದ ಮರುದಿನವೇ ಗಂಡ ಕೆಲಸಕ್ಕೆ ಹೋದ ಸಮಯ ನೋಡಿ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಮತ್ತೆ ಅದೇ ಹೇಮಂತನ ಜೊತೆ ಪರಾರಿಯಾಗುವ ಮೂಲಕ ಹೆಣ್ಣಿನ ಮನಸ್ಸಿನ ಚಂಚಲತೆ ಮತ್ತು ಕ್ರೂರತೆಯನ್ನು ಮೆರೆದಿದ್ದಾಳೆ.
ಸಾಕಿ ಬೆಳೆಸಿದ ಅಕ್ಕನ ಮಗನ ವಿಶ್ವಾಸಘಾತುಕತನ ಹಾಗೂ ಹೆಂಡತಿಯ ನಿರಂತರ ವಂಚನೆಯಿಂದ ಶಿವಣ್ಣ ಸಮಾಜದಲ್ಲಿ ತಲೆ ಎತ್ತದಂತಾದರು. ಮನನೊಂದು ಬದುಕಿನ ಅಂತ್ಯ ಹಾಡಲು ನಿರ್ಧರಿಸಿದ ಅವರು, ತಾನು ಹೋದ ಮೇಲೆ ಮಕ್ಕಳ ಗತಿ ಏನು ಎಂದು ಯೋಚಿಸಿ, ಇಬ್ಬರು ಪುಟ್ಟ ಕಂದಮ್ಮಗಳನ್ನು ಉಸಿರುಗಟ್ಟಿಸಿ ಕೊಂದು ತಾವೂ ನೇಣಿಗೆ ಶರಣಾಗಿದ್ದಾರೆ. ನಂಬಿದವರಿಂದಲೇ ವಂಚನೆಗೊಳಗಾದ ಶಿವಣ್ಣನ ಕಥೆ ಈಗ ಸ್ಮಶಾನ ಮೌನದಲ್ಲಿ ಅಂತ್ಯವಾಗಿದೆ. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

