
ವಿಜಯನಗರ: ಜಿಲ್ಲೆಯ ಡಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಿತ್ತೂರು ಗ್ರಾಮದ ನಾಗಪ್ಪ (56), ಇವರ ಪುತ್ರ ಕೊಟ್ರೇಶ್ (22), ಪುತ್ರಿ ಸುಜಾತಾ (35) ಹಾಗೂ ತಿಮ್ಮಲಾಪುರ ಗ್ರಾಮದ ದುರುಗಪ್ಪ (55) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕಿತ್ತೂರು ಗ್ರಾಮದ ಈ ನಾಲ್ವರು ಎರಡು ಬೈಕುಗಳಲ್ಲಿ ಕೊಟ್ರೇಶ್‌ಗೆ ಕನ್ಯೆ ನೋಡಲು ತೆರಳುತ್ತಿದ್ದಾಗ ಈ ವಿಧಿಲೀಲೆ ಸಂಭವಿಸಿದೆ.
ಸರಣಿ ಅಪಘಾತದ ಭೀಕರತೆ:
ಡಣಾಪುರ ಸೇತುವೆ ಬಳಿ ವೇಗವಾಗಿ ಬಂದ ಲಾರಿಯೊಂದು ಮೊದಲು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದು, ಅಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ಲಾರಿ ನಂತರ ಕನ್ಯೆ ನೋಡಲು ಹೋಗುತ್ತಿದ್ದ ಕುಟುಂಬದ ಎರಡು ಬೈಕ್‌ಗಳಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಅಷ್ಟಕ್ಕೆ ನಿಲ್ಲದ ಲಾರಿ, ಮುಂದಿದ್ದ ಕಾರು ಹಾಗೂ ಸೇತುವೆ ಮೇಲಿದ್ದ ಬಸ್‌ನ ಹಿಂಭಾಗಕ್ಕೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಲಾರಿ ಪಲ್ಟಿಯಾಗಿ ಸೇತುವೆಯ ಕೆಳಗೆ ಬಿದ್ದಿದೆ.
ಘಟನಾ ಸ್ಥಳದಲ್ಲಿ ಮೃತರ ಕುಟುಂಬದವರ ಕ್ರಂದನ ಮುಗಿಲು ಮುಟ್ಟಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಾರ್ವಜನಿಕರ ನೆರವಿನೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ, ವಾಹನಗಳ ತೆರವು ಕಾರ್ಯಾಚರಣೆ ನಡೆಸಿದರು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

