
ಗದಗ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಮೆಕ್ಕೆಜೋಳ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿರಂತರ ತೇವಾಂಶದಿಂದಾಗಿ ಕಾಳುಗಳ ಗುಣಮಟ್ಟ ಕುಸಿದಿದ್ದು, ಕೈಗೆ ಬಂದ ಅಲ್ಪಸ್ವಲ್ಪ ಫಸಲಿಗೂ ಮಾರುಕಟ್ಟೆಯಲ್ಲಿ ನಿರೀಕ್ಷಿತ ದರ ಸಿಗದೆ ರೈತರು ಆತಂಕಗೊಂಡಿದ್ದಾರೆ. ಅತಿಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ವೈಜ್ಞಾನಿಕ ಬೆಲೆ ಸಿಗದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಉತ್ಪಾದನಾ ವೆಚ್ಚ ಹೆಚ್ಚಳ, ದರದಲ್ಲಿ ಭಾರಿ ಕುಸಿತ
ಕಳೆದ ತಿಂಗಳಷ್ಟೇ ಮಾರುಕಟ್ಟೆಯಲ್ಲಿ ಕ್ವಿಂಟಲ್ ಮೆಕ್ಕೆಜೋಳದ ಬೆಲೆ ₹2,400 ಇತ್ತು. ಆದರೆ, ಪ್ರಸ್ತುತ ಇದು ₹1,600 ಕ್ಕೆ ಕುಸಿದಿದೆ. ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ₹2,600 ರಿಂದ ₹2,800 ದರ ಇತ್ತು. ಈ ವರ್ಷದ ಭಾರಿ ದರ ಕುಸಿತವು ರೈತರ ನಿರೀಕ್ಷೆಗೆ ತಣ್ಣೀರು ಎರಚಿದೆ.
ಇದೇ ವೇಳೆ, ಮೆಕ್ಕೆಜೋಳ ಉತ್ಪಾದನೆಯ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲು ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ, ಕೂಲಿ ಕಾರ್ಮಿಕರ ವೇತನ ಮತ್ತು ಕಾಳು ತೆಗೆಯುವ ವೆಚ್ಚ ಸೇರಿ ಸುಮಾರು ₹20 ಸಾವಿರದಿಂದ ₹30 ಸಾವಿರ ರೂಪಾಯಿ ವೆಚ್ಚ ತಗಲುತ್ತದೆ. ಆದರೆ, ಪ್ರಸ್ತುತ ಮಾರುಕಟ್ಟೆಯ ದರ ಕುಸಿತದಿಂದಾಗಿ ರೈತರು ತಮ್ಮ ಶ್ರಮಕ್ಕೆ ತಕ್ಕಂತೆ ಯೋಗ್ಯ ಪ್ರತಿಫಲ ಪಡೆಯದೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ರೈತರ ಆಗ್ರಹ
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅತಿ ಹೆಚ್ಚು ಪ್ರಮಾಣದಲ್ಲಿ ಮೆಕ್ಕೆಜೋಳವನ್ನು ಬೆಳೆಯಲಾಗುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ರೈತರು ಆಗ್ರಹಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಅವರು ಮಾತನಾಡಿ, “ಪ್ರತಿ ಬಾರಿ ರೈತರ ಫಸಲು ಮಾರುಕಟ್ಟೆಗೆ ಬರುತ್ತಿದ್ದಂತೆ ಖರೀದಿದಾರರು ದಿಢೀರ್ ಬೆಲೆ ಕಡಿಮೆ ಮಾಡುತ್ತಾರೆ. ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಸಾಲ ತೀರಿಸಲು ಸಾಕು ಎಂಬ ಹತಾಶೆಯಿಂದ ಸಿಕ್ಕ ಬೆಲೆಗೆ ಮಾರಾಟ ಮಾಡುವುದು ವಾಡಿಕೆಯಾಗಿದೆ. ಇದರಿಂದ ರೈತರಿಗಿಂತ ವರ್ತಕರಿಗೇ ಹೆಚ್ಚು ಲಾಭವಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ, ಸರ್ಕಾರವು ತಕ್ಷಣವೇ ರೈತರ ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ಶಾಶ್ವತ ಬೆಂಬಲ ಬೆಲೆ ಘೋಷಣೆ ಮಾಡಿ, ಖರೀದಿ ಕೇಂದ್ರವನ್ನು ತೆರೆಯಬೇಕು. ಇದರಿಂದ ವ್ಯಾಪಾರಸ್ಥರು ಕಡಿಮೆ ಬೆಲೆಗೆ ಕೊಳ್ಳುವುದು ಕಡಿಮೆಯಾಗುತ್ತದೆ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

