ಸಾಲ ಭಾಧೆ ತಾಳಲಾರದೆ ಅಮರಗೋಳದ ರೈತ ಆತ್ಮಹತ್ಯೆ

Spread the love

ನವಲಗುಂದ: ತಾಲ್ಲೂಕಿನ ಅಮರಗೋಳ ಗ್ರಾಮದ ಯುವ ರೈತ ಕಾಂತೇಶ ಯಲ್ಲಪ್ಪ ದೊಡ್ಡಮನಿ (28) ಅವರು ಬೆಳೆ ನಷ್ಟ ಮತ್ತು ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ದುರಂತ ಘಟನೆಯು ತೀವ್ರ ಸಂಕಟವನ್ನುಂಟು ಮಾಡಿದೆ ಎಂದು ನವಲಗುಂದ ಮತಕ್ಷೇತ್ರದ ಮಾಜಿ ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.

ಘಟನೆಯ ವಿವರ:
ರೈತ ಕಾಂತೇಶ ದೊಡ್ಡಮನಿ ಅವರು ಕೆವಿಜಿಬಿ ಬ್ಯಾಂಕ್‌ನಲ್ಲಿ ₹4 ಲಕ್ಷ ಮತ್ತು ವಿವಿಧ ಸಂಘಗಳಿಂದ ₹1.5 ಲಕ್ಷ ಸೇರಿ ಅಂದಾಜು ₹5.5 ಲಕ್ಷ ಸಾಲ ಮಾಡಿಕೊಂಡಿದ್ದರು. ಸತತವಾಗಿ ಸುರಿದ ಮಳೆಯಿಂದಾಗಿ, ತಮ್ಮ ಆರು ಎಕರೆಯಲ್ಲಿ ಬೆಳೆದಿದ್ದ ಹೆಸರು ಬೆಳೆ ಸಂಪೂರ್ಣವಾಗಿ ನಾಶವಾಗಿ ನಿರೀಕ್ಷಿತ ಆದಾಯ ಸಿಗದೇ ಇದ್ದುದರಿಂದ ಕಾಂತೇಶ ಅವರು ಈ ತೀವ್ರ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಸರ್ಕಾರದ ವಿರುದ್ಧ ಮುನೇನಕೊಪ್ಪ ಕಿಡಿ:
“ಕಾಂಗ್ರೆಸ್ ಸರ್ಕಾರವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡು ರೈತರಲ್ಲಿ ಧೈರ್ಯ ತುಂಬಿದ್ದರೆ, ಈ ರೀತಿಯ ಘಟನೆಗಳು ನಡೆಯುತ್ತಿರಲಿಲ್ಲ” ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಮಯದಲ್ಲಿ ನೊಂದಿರುವ ಕಾಂತೇಶ ಕುಟುಂಬದೊಂದಿಗೆ ತಾನು ಸದಾ ಇರುವುದಾಗಿ ಭರವಸೆ ನೀಡಿದ ಅವರು, ಮೃತರ ಕುಟುಂಬಕ್ಕೆ ತಕ್ಷಣವೇ ₹25 ಲಕ್ಷ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮೃತ ಕಾಂತೇಶನ ಆತ್ಮಕ್ಕೆ ಶಾಂತಿ ಕೋರಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆ ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಗಮನ ಹರಿಸಬೇಕಾದ ಅಗತ್ಯವನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

Leave a Reply

Your email address will not be published. Required fields are marked *