ದಯಾಮರಣ ಕೋರಿ ರಾಷ್ಟ್ರಪತಿಗೆ ಉದಯ್ ಜೈನ್ ಮನವಿ

Spread the love


ದಯಾಮರಣ ಕೋರಿ ರಾಷ್ಟ್ರಪತಿಗೆ ಉದಯ್ ಜೈನ್ ಮನವಿ

ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ–ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ಈ ಪ್ರಕರಣದಲ್ಲಿ ಆರೋಪ ಹೊತ್ತಿರುವ ಉದ್ಯಮಿ ಉದಯ್ ಜೈನ್, ತಾನು ನಿರ್ದೋಷಿ ಎಂದು ಹೇಳಿಕೊಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ.

“13 ವರ್ಷಗಳಿಂದ ಅಪಮಾನ”
“ಸೌಜನ್ಯಾ ಕೇಸ್‌ನಲ್ಲಿ ಬಲವಂತವಾಗಿ ನನ್ನ ಹೆಸರು ಸೇರಿಸಲಾಗಿದೆ. ನಾನು ನಿರ್ದೋಷಿ. ಬೈನ್ ಮ್ಯಾಪಿಂಗ್ ವರದಿ, ಸಿಬಿಐ ಹಾಗೂ ಸಿಐಡಿ ತನಿಖೆಗಳಲ್ಲೂ ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ಆದರೂ 13 ವರ್ಷಗಳಿಂದ ಸಮಾಜದಲ್ಲಿ ನಿರಂತರ ಅವಮಾನ ಎದುರಿಸುತ್ತಿದ್ದೇನೆ. ಇನ್ನು ನ್ಯಾಯ ಸಿಗದಿದ್ದರೆ ದಯಾಮರಣ ನೀಡಬೇಕು” ಎಂದು ಪತ್ರದಲ್ಲಿ ಉದಯ್ ಜೈನ್ ಮನವಿ ಮಾಡಿದ್ದಾರೆ.

ಘಟನೆಯ ಹಿನ್ನಲೆ
2012ರ ಅಕ್ಟೋಬರ್ 9ರಂದು ಧರ್ಮಸ್ಥಳ ಉಜಿರೆ ಸಮೀಪದ ಶಾಂತಿವನ ಬಳಿ ಸೌಜನ್ಯಾ ಕಾಣೆಯಾದ ಬಳಿಕ ಹತ್ಯೆಗೀಡಾದರು. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಬೆಳ್ತಂಗಡಿ ಪೊಲೀಸರು ಸಂತೋಷ್ ರಾವ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ನಂತರ ಸಿಬಿಐ ತನಿಖೆಯಲ್ಲಿಯೂ ಸಂತೋಷ್ ರಾವ್ ಆರೋಪಿಯಾಗಿದ್ದರು.

ಆದರೆ ಒಂದು ವರ್ಷದ ನಂತರ ಖಾಸಗಿ ವಾಹಿನಿಯಲ್ಲಿ ನಡೆದ ಲೈವ್ ಚರ್ಚೆಯಲ್ಲಿ ರೌಡಿ ಶೀಟರ್ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯಾ ಕುಟುಂಬದವರು ಉದಯ್ ಜೈನ್ ಹೆಸರು ಹೊರ ಹಾಕಿದ್ದರು. ಅದರಿಂದಲೇ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿತ್ತು.

“ಉದ್ದೇಶಪೂರ್ವಕವಾಗಿ ನನ್ನ ಹೆಸರು ಸೇರಿಸಿದರು”
“ನನ್ನ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ FIR ಇಲ್ಲ. ಸಿಐಡಿ ಮತ್ತು ಸಿಬಿಐ ತನಿಖೆಗಳಲ್ಲೂ FIR ಇಲ್ಲ. ಆದರೂ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಸೇರಿಸಿ ಜನರಲ್ಲಿ ಅನುಮಾನ ಮೂಡಿಸಿದ್ದಾರೆ. ನಾನು ಕಾನೂನಿನ ಮುಂದೆ ನಿರ್ದೋಷಿ” ಎಂದು ಜೈನ್ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೋರ್ಟ್ ಹೋರಾಟ – ಕಾಟ ತಡೆಗಟ್ಟಲು ಮನವಿ
ಉದ್ಯಮಿ ಉದಯ್ ಜೈನ್, ಸಿಬಿಐ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಬೈನ್ ಮ್ಯಾಪಿಂಗ್ ಮಾಡಿಸಿಕೊಂಡಿದ್ದರೂ ತನ್ನ ಹೆಸರನ್ನು ಶಂಕಾಸ್ಪದವಾಗಿ ಎಳೆಯಲಾಗುತ್ತಿದೆ ಎಂದು ದೂರು ನೀಡಿದ್ದಾರೆ. “ನ್ಯಾಯ ಸಿಗಲಿ ಅಥವಾ ದಯಾಮರಣ ನೀಡಿ” ಎಂಬ ಮನವಿಯನ್ನು ರಾಷ್ಟ್ರಪತಿಗೆ ಸಲ್ಲಿಸಿರುವುದರಿಂದ ಪ್ರಕರಣ ಮತ್ತೆ ಚರ್ಚೆಗೆ ಕಾರಣವಾಗಿದೆ.


Leave a Reply

Your email address will not be published. Required fields are marked *