ಶಿವಾಜಿನಗರದಲ್ಲಿ ಜಿಬಿಎ ಅಧಿಕಾರಿಗಳ ಮೇಲೆ ಹಲ್ಲೆ ಪ್ರಕರಣ: ‘ನಮ್ಮ ಕರ್ನಾಟಕ ಸೇನೆ’ಯ ಪ್ರಮುಖ ಆರೋಪಿ ಬಸವರಾಜ್ ಸೇರಿ 11 ಮಂದಿ ಬಂಧನ

Spread the love

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಶಿವಾಜಿನಗರದಲ್ಲಿ ಪಾದಚಾರಿ ಮಾರ್ಗ ತೆರವುಗೊಳಿಸುವ ಕಾರ್ಯಾಚರಣೆ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ, ‘ನಮ್ಮ ಕರ್ನಾಟಕ ಸೇನೆ’ ಸಂಘಟನೆಯ ಬಸವರಾಜ್ ಪಡುಕೋಟೆಯನ್ನು ತಡರಾತ್ರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಮಂಗಳವಾರ ಮಧ್ಯಾಹ್ನ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಜಿಬಿಎ ಅಧಿಕಾರಿಗಳು ಫುಟ್‌ಪಾತ್ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದರು. ಈ ವೇಳೆ ಸ್ಥಳೀಯ ವ್ಯಾಪಾರಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಅಧಿಕಾರಿಗಳೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿ, ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿ ದೌರ್ಜನ್ಯ ಎಸಗಲಾಗಿತ್ತು. ಈ ದಾಳಿಯಲ್ಲಿ ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು ಆರು ಜನ ಅಧಿಕಾರಿಗಳು ಗಾಯಗೊಂಡಿದ್ದರು.

ಇನ್ನು ಬಂಧನಕ್ಕೊಳಗಾಗುವ ಮೊದಲು ಅಜ್ಞಾತ ಸ್ಥಳದಿಂದ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದ ಆರೋಪಿ ಬಸವರಾಜ್, ಪ್ರಕರಣಕ್ಕೆ ಬೇರೆಯದೇ ತಿರುವು ನೀಡಲು ಯತ್ನಿಸಿದ್ದ. ತಮಗೂ ಫುಟ್‌ಪಾತ್ ಗಲಾಟೆಗೂ ಸಂಬಂಧವಿಲ್ಲ, ಬದಲಿಗೆ ಅಲ್ಲಿ ಹಾರಿಸಲಾಗಿದ್ದ ಕನ್ನಡ ಧ್ವಜ ಹಾಗೂ ಗಣೇಶ ದೇವಸ್ಥಾನ ತೆರವುಗೊಳಿಸಲು ಬಂದಿದ್ದ ಅಧಿಕಾರಿಗಳ ಉದ್ದಟತನವನ್ನು ಪ್ರತಿಭಟಿಸಿದ್ದಾಗಿ ಹೇಳಿಕೊಂಡಿದ್ದ. ಅಲ್ಲದೆ ತಾನೇ ಸ್ವತಃ ಶರಣಾಗುವುದಾಗಿ ವಿಡಿಯೋದಲ್ಲಿ ತಿಳಿಸಿದ್ದ.

ಆದರೆ ಆರೋಪಿ ಶರಣಾಗುವ ಮುನ್ನವೇ ಚುರುಕಾದ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಬಸವರಾಜ್ ಇದ್ದ ಜಾಗವನ್ನು ಪತ್ತೆ ಹಚ್ಚಿ ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ. ಜಿಬಿಎ ಉಪ ವಿಭಾಗದ ಎಇ ಮಾಧವ್ ರಾವ್ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಾಗಿದೆ.

ಈ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಪೊಲೀಸರು ಇದುವರೆಗೆ ಭರತ ಕೊಟ್ರೇಶ್, ಪರಶುರಾಮ್, ರಘು, ರಂಜಿತ್, ಮುಜಾಹಿದ್ ಅಹಮದ್ ಸೇರಿದಂತೆ ಒಟ್ಟು 11 ಜನರನ್ನು ಬಂಧಿಸಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Leave a Reply

Your email address will not be published. Required fields are marked *