ಧಾರವಾಡ ಕೃಷಿ ಮೇಳದಲ್ಲಿ ದುರಂತ: ಮಿನಿ ಟ್ರ್ಯಾಕ್ಟರ್‌ಗೆ ಸಿಲುಕಿ ಯುವಕನ ದುರ್ಮರಣ; ₹5 ಲಕ್ಷ ಪರಿಹಾರ

Spread the love

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ನಾಲ್ಕು ದಿನಗಳ ಕೃಷಿ ಮೇಳದಲ್ಲಿ ದುರಂತವೊಂದು ಸಂಭವಿಸಿದೆ. ಮೇಳದಲ್ಲಿ ಪ್ರದರ್ಶನಕ್ಕೆ ತಂದಿದ್ದ ಮಿನಿ ಟ್ರ್ಯಾಕ್ಟರ್‌ವೊಂದು ಕೆಳಗಿಳಿಸುವ ವೇಳೆ ಪಲ್ಟಿಯಾಗಿ, ತುಮಕೂರು ಮೂಲದ ಪರಶುರಾಮ ಆರ್. (32) ಎಂಬ ಯುವಕನ ಮೇಲೆ ಬಿದ್ದು ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ಯಾಂಟರ್ ವಾಹನದಿಂದ ಮಿನಿ ಟ್ರ್ಯಾಕ್ಟರ್‌ನ್ನು ಕೆಳಗಿಳಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ರಸ್ತೆಯ ಅವ್ಯವಸ್ಥೆಯೇ ದುರಂತಕ್ಕೆ ಕಾರಣ?
ಕೃಷಿ ಮೇಳದ ಟ್ರ್ಯಾಕ್ಟರ್ ಪ್ರದರ್ಶನ ಮಳಿಗೆಯ ಆವರಣದಲ್ಲಿ ರಸ್ತೆಯು ಸರಿಯಾಗಿಲ್ಲ. ಕೆಸರು ಗದ್ದೆಯಂತಾಗಿರುವ ಪರಿಸ್ಥಿತಿಯೇ ಈ ಘಟನೆಗೆ ಕಾರಣ ಎಂದು ಕೆಲವರು ಆರೋಪಿಸಿ, ಸ್ಥಳದಲ್ಲೇ ಪ್ರತಿಭಟನೆ ನಡೆಸಿದರು.

₹5 ಲಕ್ಷ ಪರಿಹಾರ: ಪ್ರತಿಭಟನೆಗೆ ಮಣಿದ ವಿವಿ
ದುರಂತದ ನಂತರ, ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮೃತನ ಸಂಬಂಧಿಕರು ಮತ್ತು ಕೆಲ ಸ್ಥಳೀಯರು ಪ್ರತಿಭಟನೆ ನಡೆಸಿದರು. ಮೃತದೇಹವನ್ನು ಸ್ಥಳದಿಂದ ತೆರವುಗೊಳಿಸಲು ಅವರು ಬಿಡಲಿಲ್ಲ. ಪ್ರತಿಭಟನೆಗೆ ಮಣಿದ ಕೃಷಿ ವಿಶ್ವವಿದ್ಯಾಲಯವು, ಮೃತನ ಕುಟುಂಬಕ್ಕೆ ₹5 ಲಕ್ಷ ಪರಿಹಾರದ ಚೆಕ್ ವಿತರಿಸಿದೆ. ಕುಲಪತಿ ಪಿ.ಎಲ್. ಪಾಟೀಲ ಅವರು ಯುವಕನ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಿದ ನಂತರವೇ ಮೃತದೇಹವನ್ನು ಸ್ಥಳದಿಂದ ತೆರವುಗೊಳಿಸಲಾಯಿತು.

Leave a Reply

Your email address will not be published. Required fields are marked *