ನಾಯಕನೂರ ಬಳಿ ಟ್ರ್ಯಾಕ್ಟರ್ ಪಲ್ಟಿ: ಚಾಲಕನ ನಿರ್ಲಕ್ಷ್ಯಕ್ಕೆ ಮೂವರು ಮಹಿಳೆಯರಿಗೆ ಗಂಭೀರ ಗಾಯ

Spread the love

ನವಲಗುಂದ: ತಾಲೂಕಿನ ನಾಯಕನೂರ ಗ್ರಾಮದ ಬಳಿ ಸಾಯಂಕಾಲದ ವೇಳೆ ಟ್ರ್ಯಾಕ್ಟರ್ ಅತಿವೇಗ ಮತ್ತು ನಿಷ್ಕಾಳಜಿ ಚಾಲನೆಯಿಂದಾಗಿ ರಸ್ತೆ ಪಕ್ಕದಲ್ಲಿ ಪಲ್ಟಿ ಹೊಡೆದಿದ್ದು, ಟ್ರೇಲರ್‌ನಲ್ಲಿದ್ದ ಮೂವರು ಮಹಿಳೆಯರು ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಇತರ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೊನ್ನೆ ಸಾಯಂಕಾಲ 7:30 ಗಂಟೆ ಸುಮಾರಿಗೆ ನಾಯಕನೂರ-ತಡಹಾಳ ರಸ್ತೆಯ ಮೇಲೆ, ಅಕ್ಕಿಯವರ ಹಳ್ಳದ ಸಮೀಪ ಈ ದುರಂತ ಸಂಭವಿಸಿದೆ.

ರಾಮದುರ್ಗ ತಾಲೂಕಿನ ಉಗಾಳಾಪೂರ ನಿವಾಸಿ, ಆರೋಪಿತ ಚಾಲಕ ಚೇತನ ನೀಲನ (ವಯಾ 24 ವರ್ಷ) ಇತನು ತಾನು ಚಲಾಯಿಸುತ್ತಿದ್ದ ಸೋನಾಲಿಕಾ ಕಂಪನಿಯ ಟ್ರ್ಯಾಕ್ಟರ್ (ನಂ: KA-25-TC-1493) ಮತ್ತು ಟ್ರೇಲರ್‌ ಅನ್ನು ಶಲವಡಿ ಕಡೆಯಿಂದ ತಡಹಾಳ ಕಡೆಗೆ ಅತೀವೇಗವಾಗಿ ಮತ್ತು ಸಂಪೂರ್ಣ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದಿದ್ದಾನೆ. ಮಾನವೀಯ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ವಾಹನ ಚಲಾಯಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟ್ರೇಲರ್‌ ಸಮೇತ ರಸ್ತೆಯ ಎಡಬದಿಯಲ್ಲಿ ಪಲ್ಟಿ ಹೊಡೆದು ಕೆಳಗೆ ಬಿದ್ದಿದೆ.

ಈ ಅಪಘಾತದಲ್ಲಿ ಟ್ರೇಲರ್‌ನಲ್ಲಿ ಕುಳಿತಿದ್ದ ಜ್ಯೋತಿ ತಂದೆ ಮಲಪ್ಪ ದೊಡಮನಿ ಅವರಿಗೆ ಎಡಗೈಗೆ ಒಳಪೆಟ್ಟು ಹಾಗೂ ಬಲಗೈ ಮುಂಗೈನ ಹತ್ತಿರ ಒಳಗಾಯವಾಗಿದೆ. ಅದೇ ರೀತಿ ಪವಿತ್ರಾ ತಂದೆ ಪ್ರಕಾಶ ದೊಡಮನಿ ಮತ್ತು ವಿಜಯಲಕ್ಷ್ಮೀ ತಂದೆ ಗೋಪಾಲ ಪೂಜಾರ ಇಬ್ಬರಿಗೂ ಬಲಗೈಗೆ ಒಳಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡ ಮೂವರು ಮಹಿಳೆಯರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರೇಲರ್‌ನಲ್ಲಿ ಇದ್ದ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನಿಷ್ಕಾಳಜಿ ಮತ್ತು ಅತಿ ವೇಗದ ಚಾಲನೆಯಿಂದ ಅಪಘಾತಕ್ಕೆ ಕಾರಣನಾದ ಚಾಲಕ ಚೇತನ ನೀಲನ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *