ಐದು ವರ್ಷದೊಳಗಿನ 2.07 ಲಕ್ಷ ಮಕ್ಕಳಿಗೆ ಲಸಿಕೆ ಗುರಿ: ಜಿಲ್ಲಾಧಿಕಾರಿ ಸ್ನೇಹಲ್ ಆರ್

Spread the love

ಧಾರವಾಡ, ಮೇ 19: ಜಿಲ್ಲೆಯಾದ್ಯಂತ ಬರುವ ಜೂನ್ 28ರಿಂದ ಜುಲೈ 1ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಮಗ್ರ ಸಿದ್ಧತೆ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶೂನ್ಯದಿಂದ ಐದು ವರ್ಷದೊಳಗಿನ ಯಾವುದೇ ಮಗು ಪೋಲಿಯೋ ಹನಿಯಿಂದ ವಂಚಿತವಾಗದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಮರ್ಪಕ ಕಾರ್ಯಯೋಜನೆ ರೂಪಿಸಬೇಕು ಎಂದು ತಿಳಿಸಿದರು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.

ಜೂನ್ 28ರಂದು ಜಿಲ್ಲೆಯಾದ್ಯಂತ ಬೂತ್ ಮಟ್ಟದಲ್ಲಿ ಲಸಿಕಾ ಕಾರ್ಯ ನಡೆಯಲಿದ್ದು, ಜೂನ್ 29 ಮತ್ತು 30ರಂದು ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಮಕ್ಕಳಿಗೆ ಪೋಲಿಯೋ ಹನಿ ನೀಡಲಿದ್ದಾರೆ. ನಗರ ಪ್ರದೇಶಗಳಲ್ಲಿ ಜೂನ್ 29ರಿಂದ ಜುಲೈ 1ರವರೆಗೆ ಮನೆಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯ ನಡೆಯಲಿದೆ. ಸಾರ್ವಜನಿಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಒಟ್ಟು 2,07,837 ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕಾಗಿ ಜಿಲ್ಲೆಯಾದ್ಯಂತ 891 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, 92 ಟ್ರಾಂಜಿಟ್ ತಂಡಗಳು ಹಾಗೂ 57 ಮೊಬೈಲ್ ತಂಡಗಳು ಕಾರ್ಯನಿರ್ವಹಿಸಲಿವೆ. ಕಾರ್ಯಕ್ರಮದಲ್ಲಿ 3,829 ವ್ಯಾಕ್ಸಿನೇಟರ್‌ಗಳು ಮತ್ತು 214 ಮೇಲ್ವಿಚಾರಕರು ಭಾಗವಹಿಸಲಿದ್ದು, ಒಟ್ಟು 4,28,540 ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಲಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಸಭೆಯಲ್ಲಿ ಮುಂಬರುವ ಮಳೆಗಾಲದ ಹಿನ್ನೆಲೆ ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ ಸೇರಿದಂತೆ ಕೀಟಜನ್ಯ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತೂ ಚರ್ಚೆ ನಡೆಯಿತು. ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಸಾರ್ವಜನಿಕ ಆರೋಗ್ಯ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅನುಷ್ಠಾನ ಕುರಿತ ವಿವರ ನೀಡಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸುಜಾತಾ ಹಸವೀಮಠ ವಂದಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *