
ಮಳವಳ್ಳಿ: ಬಿಡದಿ ಸಮೀಪದ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಂಡು ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ದಂಧೆಗೆ ಮುಂದಾಗಿದೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಭರತ್ ರಾಜ್ ಆರೋಪಿಸಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಪಕ್ಕದ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಪ್ರದೇಶಗಳಲ್ಲಿರುವ ಸಾವಿರಾರು ಎಕರೆ ಕೃಷಿಯೋಗ್ಯ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದನ್ನು ಪ್ರಾಂತ ರೈತ ಸಂಘ ಖಂಡಿಸುತ್ತದೆ ಎಂದರು.
ದೆಹಲಿಯಲ್ಲಿ ರೈತರು ನಡೆಸಿದ ದೀರ್ಘಕಾಲದ ಹೋರಾಟದ ಮಾದರಿಯಲ್ಲೇ ಆ ಭಾಗದ ರೈತರು ಕಳೆದ 435 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದೇ 29ರಂದು ನಡೆಯಲಿರುವ “ಬೈರಮಂಗಲ ಚಲೋ” ಹೋರಾಟಕ್ಕೆ ಪ್ರಾಂತ ರೈತ ಸಂಘ ಬೆಂಬಲ ಸೂಚಿಸುತ್ತಿದ್ದು, ಹೋರಾಟ ನಿರತ ರೈತರೊಂದಿಗೆ ಸಂಘ ನಿಲ್ಲಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಮಹದೇವು, ಗುರುಸ್ವಾಮಿ, ಚಿಕ್ಕಮೊಗಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

