
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತೋಡದಗದ್ದೆ ಸಮೀಪದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿ, ಬಳಿಕ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದ ಪರಿಣಾಮ ಮಗು ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ವಸತಿ ನಿಲಯದಲ್ಲಿ ವಾಸವಾಗಿದ್ದ ಸುಮಾರು 15 ವರ್ಷದ ಬಾಲಕಿ ಯಾರಿಗೂ ತಿಳಿಯದಂತೆ ಹಾಸ್ಟೆಲ್‌ನ ಶೌಚಾಲಯದಲ್ಲೇ ಹೆರಿಗೆ ಮಾಡಿಕೊಂಡಿದ್ದಾಳೆ. ಹೆರಿಗೆಯಾದ ಬಳಿಕ ಗಾಬರಿಗೊಂಡಿದ್ದ ಬಾಲಕಿ ಅಥವಾ ವಿಷಯವನ್ನು ಮರೆಮಾಚುವ ಉದ್ದೇಶದಿಂದ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ ಎಂದು ಹೇಳಲಾಗಿದೆ. ಕಿಟಕಿಯಿಂದ ಕೆಳಗೆ ಬಿದ್ದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಘಟನೆ ಆರಂಭದಲ್ಲಿ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ, ವಸತಿ ನಿಲಯದ ಸಮೀಪ ಕಸ ಸಂಗ್ರಹಿಸುತ್ತಿದ್ದವರಿಗೆ ನವಜಾತ ಶಿಶುವಿನ ಮೃತದೇಹ ಕಂಡುಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ತನಿಖೆಯ ವೇಳೆ ವಸತಿ ನಿಲಯದಲ್ಲಿದ್ದ ಅಪ್ರಾಪ್ತ ಬಾಲಕಿಯೇ ಮಗುವಿಗೆ ಜನ್ಮ ನೀಡಿದ್ದು, ಬಳಿಕ ಶಿಶುವನ್ನು ಹೊರಗೆ ಎಸೆದಿರುವುದು ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೆರಿಗೆಯಿಂದ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದ್ದು, ಪೊಲೀಸರ ವಿಚಾರಣೆ ವೇಳೆ ಬಾಲಕಿ ತನ್ನ ದೊಡ್ಡಪ್ಪನ ಮಗನೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ತಾನು ಗರ್ಭಿಣಿಯಾಗಿದ್ದೆ ಎಂದು ಆರೋಪಿಸಿರುವುದಾಗಿ ವರದಿಯಾಗಿದೆ. ಈ ಸಂಬಂಧ ಆರೋಪಿತನ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಶಿರಸಿ ತಹಶೀಲ್ದಾರ್ ಪಟ್ಟರಾಜ್ ಗೌಡ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿನಿಯರ ಸುರಕ್ಷತೆ, ಆರೋಗ್ಯ ಮೇಲ್ವಿಚಾರಣೆ ಹಾಗೂ ಸಮರ್ಪಕ ನಿಗಾ ವ್ಯವಸ್ಥೆಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕೇವಲ 15 ವರ್ಷದ ಬಾಲಕಿ ಗರ್ಭಿಣಿಯಾಗಿದ್ದರೂ ಅದು ವಸತಿ ನಿಲಯದ ಸಿಬ್ಬಂದಿಯ ಗಮನಕ್ಕೆ ಬಾರದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

