ಮೌಢ್ಯ ಹೋಗಲಾಡಿಸಲು ವೈಚಾರಿಕತೆ, ಶಿಕ್ಷಣವೇ ಮುಖ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

Spread the love

ಲಕ್ಷ್ಮೇಶ್ವರ (ಗದಗ ಜಿಲ್ಲೆ), ಡಿ. 13: ನಾವು ಬಸವಣ್ಣನವರ ನಾಡಿನಲ್ಲಿ ಹುಟ್ಟಿದ್ದರೂ, ಇಂದಿಗೂ ಕೂಡ ಮೌಢ್ಯಗಳನ್ನು ಆಚರಿಸುತ್ತಿರುವುದು ದುರ್ದೈವದ ಸಂಗತಿ. ಮೌಢ್ಯ ಹಾಗೂ ಕಂದಾಚಾರಗಳನ್ನು ಕೊನೆಗಾಣಿಸಲು ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.

​ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಚಂದನ ಎಜುಕೇಶನ್ ಸೊಸೈಟಿ ಆಯೋಜಿಸಿದ್ದ ಭಾರತ ರತ್ನ ಪ್ರೊ.ಸಿ.ಎನ್.ಆರ್ ರಾವ್ ಅವರ 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮವನ್ನು ಉದ್ಘಾಟಿಸಿ, 2025ನೇ ಸಾಲಿನ ಪ್ರತಿಷ್ಠಿತ “ಚಂದನ ಶ್ರೀ” ಪ್ರಶಸ್ತಿಯನ್ನು ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್ ಅವರಿಗೆ ಪ್ರದಾನ ಮಾಡಿ, ಅವರು ಮಾತನಾಡಿದರು.

​ಶಿಕ್ಷಣಕ್ಕೆ ಯಾವುದೇ ವರ್ಗದ ಮಿತಿಯಿಲ್ಲ

​ಮಾನವರಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶಿಕ್ಷಣ ಅಗತ್ಯ. ಸಂವಿಧಾನವು ನೀಡಿರುವ ಭ್ರಾತೃತ್ವ, ಸ್ವಾತಂತ್ರ್ಯ, ಸಮಾನತೆಗಳು ಅಕ್ಷರಶಃ ಜಾರಿಯಾಗದೇ, ಜಾತಿ ವ್ಯವಸ್ಥೆಯಾಗಲಿ, ಅಸಮಾನತೆಯಾಗಲಿ ಹೋಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು. ಎಲ್ಲ ಧರ್ಮಗಳೂ ಮಾನವೀಯತೆಯನ್ನು ಬೋಧಿಸುತ್ತವೆ. ಆದರೆ ಪಟ್ಟಭದ್ರಹಿತಾಸಕ್ತಿಗಳು ಧರ್ಮವನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಕಷ್ಟದಲ್ಲಿದ್ದಾಗ ಅದನ್ನು ತನ್ನ ಹಣೆಬರಹವೆಂದು ಸುಮ್ಮನಿರದೇ, ಇಚ್ಛಾಶಕ್ತಿಯಿಂದ ಶ್ರಮಿಸಿದರೆ, ಯಾವುದೇ ವರ್ಗದವರು ಕೂಡ ಸಾಧನೆಗಳನ್ನು ಮಾಡಬಹುದಾಗಿದೆ. ಶಿಕ್ಷಣವೆಂಬುದು ಒಂದು ವರ್ಗಕ್ಕೆ ಸೀಮಿತವಾದುದಲ್ಲ. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶಗಳ ಸದುಪಯೋಗ ಪಡೆದು, ಉನ್ನತ ಸ್ಥಾನಕ್ಕೆ ತಲುಪಬಹುದು ಎಂದು ಅವರು ನುಡಿದರು.

​ಭಾರತ ರತ್ನ ಪ್ರೊ. ಸಿ.ಎನ್.ಆರ್ ರಾವ್ ಅವರು ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿಯೇ ಕಲಿತು, ವಿಜ್ಞಾನದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದ ಅಪರೂಪದ ವಿಜ್ಞಾನಿ. ಸಂಶೋಧನೆಯನ್ನೇ ಜೀವನವಾಗಿಸಿಕೊಂಡಿದ್ದ ಅವರಿಗೆ ಅವರ ಧರ್ಮಪತ್ನಿ ಒತ್ತಾಸೆಯಾಗಿದ್ದರು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು. ದೇಶದ ಪ್ರಧಾನಿ ನೆಹರು ಅವರು ಕೂಡ ಎಲ್ಲರೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದ್ದರು, ಇದೇ ಉದ್ದೇಶವನ್ನು ಚಂದನ ಶ್ರೀ ವಿದ್ಯಾಲಯದಲ್ಲಿ ವಿಜ್ಞಾನ ಮತ್ತು ವೈಚಾರಿಕತೆಗೆ ಹೆಚ್ಚು ಒತ್ತು ನೀಡಿರುವುದು ಉತ್ತಮ ಬೆಳವಣಿಗೆ ಎಂದು ಮುಖ್ಯಮಂತ್ರಿಗಳು ಪ್ರಶಂಸಿಸಿದರು.

​ನಾಡಿಗೆ ಅಪಾರ ಸೇವೆ ಸಲ್ಲಿಸಿದ ಬಿ.ಎಸ್. ಪಾಟೀಲ್

​ಪ್ರತಿಷ್ಠಿತ ‘ಚಂದನ ಶ್ರೀ’ ಪ್ರಶಸ್ತಿಯನ್ನು ಸ್ವೀಕರಿಸಿದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್ ಅವರ ಸೇವೆಯನ್ನು ಮುಖ್ಯಮಂತ್ರಿಗಳು ಕೊಂಡಾಡಿದರು. ರೈತ ಕುಟುಂಬದಿಂದ ಬಂದು, ವಿದ್ಯಾಭ್ಯಾಸ ಮಾಡಿ, ಸೈನ್ಯ ಸೇರಿ ನಂತರ ಐಎಎಸ್ ಅಧಿಕಾರಿಯಾದ ಪಾಟೀಲರವರು, ಅಪಘಾತವಾಗಿದ್ದರೂ ಇಚ್ಛಾಶಕ್ತಿಯಿಂದ ಐಎಎಸ್ ಉತ್ತೀರ್ಣರಾಗಲು ಸಾಧ್ಯವಾಯಿತು. ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಅವರು, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು ಹಾಗೂ ನಾಡಿನ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿದ್ದರು. ಜೆ. ಹೆಚ್. ಪಟೇಲರ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚು ಕೆಲಸ ಮಾಡಿದ್ದರು. ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರನ್ನು ವಿಭಜಿಸಲು ಪಾಟೀಲರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈಗಲೂ ಅವರ ಅಧ್ಯಕ್ಷತೆಯಲ್ಲಿ ರಚನೆ ಮಾಡಿರುವ ಸಮಿತಿ ವರದಿಯನ್ನು ಸಲ್ಲಿಸಿದ್ದು, ಗ್ರೇಟರ್ ಬೆಂಗಳೂರನ್ನು ಐದು ಕಾರ್ಪೋರೇಷನ್‌ಗಳನ್ನಾಗಿ ವಿಭಜಿಸಲಾಗಿದೆ ಎಂದು ತಿಳಿಸಿದರು. ನಾಡಿಗೆ ಅಪಾರವಾದ ಸೇವೆ ಸಲ್ಲಿಸಿದ ಪಾಟೀಲರನ್ನು ಗುರುತಿಸಿ ಚಂದನ ಎಜುಕೇಶನಲ್ ಸಂಸ್ಥೆ ಆಯ್ಕೆ ಮಾಡಿರುವುದು ಸೂಕ್ತವಾಗಿದೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *