

ಧಾರವಾಡ: ಪಂಡಿತ ರಾಜೀವ್ ತಾರಾನಾಥ್ ಅವರು ವಿಶ್ವ ಕಂಡ ಸರ್ವಶ್ರೇಷ್ಠ ಸರೋದ್ ವಾದಕರು ಮಾತ್ರವಲ್ಲದೆ, ಸಂಗೀತ ಲೋಕದ ಮಾಂತ್ರಿಕರೂ, ಬಹುತ್ವ ಭಾರತದ ಭವ್ಯ ಕನಸುಗಾರರೂ ಆಗಿದ್ದರು ಎಂದು ಹೊಸಪೇಟೆಯ ಸಂಸ್ಕೃತಿ ಚಿಂತಕ ಡಾ. ರಹಮತ್ ತರೀಕೆರೆ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಶನಿವಾರದಂದು ಆಯೋಜಿಸಿದ್ದ ಪಂ. ರಾಜೀವ್ ತಾರಾನಾಥ್ ಅವರ 93ನೇಯ ಜನ್ಮದಿನದ ಸ್ಮರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರೊ. ರಾಜೀವ್ ತಾರಾನಾಥರು ಜಾತಿ, ಧರ್ಮ, ಗಡಿಗಳನ್ನು ಮೀರಿ ಬೆಳೆದವರಾಗಿದ್ದರು. ಭಾರತದ ಮಹಾನ್ ದಾರ್ಶನಿಕರು ಮತ್ತು ಸೂಫಿ ಪಂಥದ ಪ್ರತಿಪಾದಕರು ಬೋಧಿಸಿದ ಬಹುತ್ವದ ಕಲ್ಪನೆಯಂತೆ, “ನಾನು” ಎನ್ನದೇ “ನಾವು” ಎಂಬ ಭಾವನೆಯ ಸಾಮರಸ್ಯದ ಸಹಬಾಳ್ವೆಯ ಚಿಂತನೆಯನ್ನು ಅವರು ಇಷ್ಟಪಟ್ಟಿದ್ದರು. ಮನುಷ್ಯ ಇನ್ನೊಬ್ಬ ಮನುಷ್ಯನನ್ನು ವಿಭಿನ್ನವಾಗಿ ಕಾಣುವ ಪರಿವನ್ನು ಅವರು ತೀವ್ರವಾಗಿ ಖಂಡಿಸಿದವರಾಗಿದ್ದರು. ಅವರಲ್ಲಿ ಅಪಾರವಾದ ಪ್ರಯೋಗಶೀಲ ಗುಣವಿತ್ತು ಎಂದು ತರೀಕೆರೆ ತಿಳಿಸಿದರು.
ಆಂಗ್ಲ ಭಾಷಾ ಪಂಡಿತರಾಗಿದ್ದ ಅವರು, ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಖ್ಯಾತ ಸಂಗೀತಗಾರರಾದ ಅಲಿ ಅಕ್ಬರ್ ಖಾನ್ ಅವರನ್ನೇ ನನ್ನ ಗುರು ಎಂದು ಒಪ್ಪಿಕೊಂಡು ಸಂಗೀತ ಪರಂಪರೆಯನ್ನು ಮುಂದುವರೆಸಿದರು. ಹಲವಾರು ಭಾಷೆ ಬಲ್ಲ ಪ್ರಕಾಂಡ ಪಂಡಿತರಾಗಿದ್ದ ಅವರು, ಭಾರತದ ಇಂದಿನ ಸ್ಥಿತಿಗತಿಯ ಬಗ್ಗೆ ವಿಷಾದಿಸಿದ್ದರು ಎಂದು ಹೇಳಿದರು.
ಧಾರವಾಡ ನಿರಂಜನ ವಿಚಾರ ವೇದಿಕೆಯ ಸಂಚಾಲಕ ಎಚ್. ಜಿ. ದೇಸಾಯಿ ಮಾತನಾಡಿ, ಪಂ. ರಾಜೀವ್ ತಾರಾನಾಥರು ಅಪರೂಪದ ಸಂಗೀತ ವಿದ್ವಾಂಸರು. ತಮ್ಮ ಮನೆಯಿಂದಲೇ ಸಂಗೀತದ ಬಳುವಳಿಯನ್ನು ಎರವಲು ಪಡೆದ ಡಾ. ತಾರಾನಾಥ್ ಅವರು ತಮ್ಮ ತಂದೆ ಹಾಗೂ ಗುರುವಿನಿಂದ ಹೆಚ್ಚು ಪ್ರಭಾವಿತರಾಗಿದ್ದರೆಂದು ಹೇಳಿದರು.
ಮೈಸೂರಿನ ಖ್ಯಾತ ತಬಲಾ ವಾದಕರಾದ ಭೀಮಾಶಂಕರ್ ಬಿದನೂರ ಮಾತನಾಡಿ, ಪಂ. ರಾಜೀವ್ ತಾರಾನಾಥ ಅವರು ತಮ್ಮಂತಹ ಅನೇಕ ಸಂಗೀತ ಕಲಾವಿದರನ್ನು ಮಕ್ಕಳಂತೆ ಬೆಳೆಸಿ ಪ್ರೋತ್ಸಾಹಿಸಿದರು. ಅವರದು ಮೇರು ವ್ಯಕ್ತಿತ್ವ. ನಿಷ್ಠುರ ಗುಣವುಳ್ಳ ಉದಾರಿಗಳಾಗಿದ್ದರು. ಗುರುಭಕ್ತಿ ಹೇಗಿರಬೇಕು ಎಂಬುದನ್ನು ನಾವಿಂದು ಅವರಿಂದಲೇ ಕಲಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡ ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ವಹಿಸಿದ್ದರು.
ಆರಂಭದಲ್ಲಿ ವೀರಣ್ಣ ಒಡ್ಡೀನ ಸ್ವಾಗತಿಸಿದರು. ಪ್ರಾಚಾರ್ಯ ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಹಲಗತ್ತಿ ಅವರು ಅತಿಥಿಗಳನ್ನು ಪರಿಚಯಿಸಿದರು. ಕೆ. ರಾಮರಡ್ಡಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಡಾ. ಸಿ. ಬಿ. ಐನಳ್ಳಿ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಎಂ.ಡಿ. ಒಕ್ಕುಂದ, ಎಂ.ಎ. ಚಿಕ್ಕಮಠ, ಚಂದ್ರಶೇಖರ ಅಮೀನಗಡ, ಎ.ಎಲ್. ದೇಸಾಯಿ ಸೇರಿದಂತೆ ಅನೇಕ ಸಂಗೀತಾಸಕ್ತರು ಭಾಗವಹಿಸಿದ್ದರು.

