ನೆರೆ ಪರಿಹಾರದ ಬಗ್ಗೆ 48 ಗಂಟೆಗಳಲ್ಲಿ ಸಮಗ್ರ ಮಾಹಿತಿ ನೀಡಿ: ರಾಜ್ಯ ಸರ್ಕಾರಕ್ಕೆ ದೇವೇಗೌಡರ ಗಡುವು

Spread the love

ಗ್ಯಾರಂಟಿಯಿಂದ ಖಜಾನೆ ಖಾಲಿ; ಕಲ್ಯಾಣ ಕರ್ನಾಟಕಕ್ಕೆ ಹಣವಿಲ್ಲ ಎಂದು ಆಕ್ರೋಶ; ಬಿಜೆಪಿ ಜೊತೆಗಿನ ಮೈತ್ರಿ ಅಬಾಧಿತ ಎಂದು ಘೋಷಣೆ

ಬೆಂಗಳೂರು: ಕಲ್ಯಾಣ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಈವರೆಗೆ ಒದಗಿಸಿರುವ ಪರಿಹಾರ ಕ್ರಮಗಳು ಮತ್ತು ಮೊತ್ತದ ಕುರಿತು 48 ಗಂಟೆಗಳ ಒಳಗಾಗಿ ಜನತೆಗೆ ಸಮಗ್ರ ಮಾಹಿತಿ ನೀಡಬೇಕು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಸರ್ಕಾರಕ್ಕೆ ಗಡುವು ನೀಡಿದ್ದಾರೆ.

​ನಗರದ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು (ಶುಕ್ರವಾರ) ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೆರೆ ಪರಿಹಾರ ಕಾರ್ಯಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೆರೆ ಪೀಡಿತ ಪ್ರದೇಶಗಳಿಗೆ ದೇವೇಗೌಡರ ಭೇಟಿ

​”ಪ್ರವಾಹದಿಂದ ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂದಿನ 3-4 ದಿನಗಳಲ್ಲಿ ನಾನೂ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಸಾಧ್ಯವಿರುವ ಕಡೆ ರಸ್ತೆಯ ಮೂಲಕವೇ ತೆರಳಿ ಸಂತ್ರಸ್ತರನ್ನು ಭೇಟಿ ಮಾಡಿ, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಣ್ಣಾರೆ ಕಂಡು ಮಾಹಿತಿ ಪಡೆಯುತ್ತೇನೆ” ಎಂದು ದೇವೇಗೌಡರು ಘೋಷಿಸಿದರು.

​”ನೆರೆಯಿಂದಾದ ನಷ್ಟಕ್ಕೆ ತಕ್ಕಂತೆ ರಾಜ್ಯ ಸರ್ಕಾರ ನೆರವಿಗೆ ಬಂದಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಂಡು, ಬಳಿಕ ಸಮಗ್ರ ವರದಿ ಸಿದ್ಧಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸುತ್ತೇನೆ” ಎಂದು ಮಾಜಿ ಪ್ರಧಾನಿಗಳು ತಿಳಿಸಿದರು.

​ನೆರೆ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಸರ್ಕಾರ ಇದನ್ನು ತುರ್ತು ಆದ್ಯತೆ ಎಂದು ಪರಿಗಣಿಸಬೇಕು ಎಂದರು.

‘ಗ್ಯಾರಂಟಿಯಿಂದ ಖಜಾನೆ ಖಾಲಿ’ ಎಂದ ದೇವೇಗೌಡರು

​”ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿರುವುದರಿಂದ, ನೆರೆ ಪೀಡಿತ ಜಿಲ್ಲೆಗಳಿಗೆ ಮತ್ತು ಇನ್ನಿತರ ಬಾಬುಗಳಿಗೆ ಹಣವಿಲ್ಲ ಎಂದು ಶಾಸಕರೇ ಹೇಳುತ್ತಿರುವುದನ್ನು ನಾನು ಗಮನಿಸಿದ್ದೇನೆ” ಎಂದು ದೇವೇಗೌಡರು ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

​”ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಉಂಟಾಗಿರುವ ತೀವ್ರ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಈ ಸರ್ಕಾರದ ಬಳಿ ಹಣವಿಲ್ಲ” ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ ಟೀಕಿಸಿದರು.

​ಪ್ರವಾಹದಿಂದ 50ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಅಪಾರ ಸಂಖ್ಯೆಯ ಜಾನುವಾರುಗಳು ಸಾವನ್ನಪ್ಪಿದ್ದು, ದೊಡ್ಡ ಪ್ರಮಾಣದಲ್ಲಿ ಆಸ್ತಿ ಮತ್ತು ಬೆಳೆ ನಷ್ಟವಾಗಿದೆ. ರಸ್ತೆಗಳು, ಸೇತುವೆಗಳು ಕುಸಿದಿದ್ದು, ಜನ ನಿರ್ಗತಿಕರಾಗಿದ್ದಾರೆ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆ: ಅಬಾಧಿತ

​ರಾಜ್ಯ ರಾಜಕಾರಣದ ಮೈತ್ರಿ ಕುರಿತು ಮಾತನಾಡಿದ ದೇವೇಗೌಡರು, ಲೋಕಸಭೆ ಚುನಾವಣೆಗೆ ಆದ ಜೆಡಿಎಸ್‌ – ಬಿಜೆಪಿ ಮೈತ್ರಿ ಮುಂದಿನ ಎಲ್ಲಾ ಚುನಾವಣೆಗಳಿಗೂ ಅಬಾಧಿತವಾಗಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು. “ಯಾವುದೇ ಚುನಾವಣೆಯಾದರೂ ಮೈತ್ರಿಗೆ ಧಕ್ಕೆ ಇಲ್ಲ. ಈ ಬಗ್ಗೆ ಯಾರೂ ಚಿಂತಿಸಬೇಕಿಲ್ಲ. ಪಂಚಾಯಿತಿ ಮತ್ತು ವಿಧಾನಸಭೆ ಚುನಾವಣೆಗಳಿಗೂ ಮೈತ್ರಿ ಮುಂದುವರಿಯುತ್ತದೆ” ಎಂದು ಒತ್ತಿ ಹೇಳಿದರು.

​ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ ಅವರು, “ನಮ್ಮ ಬಾಂಧವ್ಯ ಉತ್ತಮವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ನಾನು ಅವರ ಬಗ್ಗೆ ಲಘುವಾಗಿ ಮಾತನಾಡಿದ ಒಂದು ಸಂದರ್ಭವನ್ನು ತೋರಿಸಿ” ಎಂದು ಸವಾಲು ಹಾಕಿದರು.

ಪಕ್ಷ ಸಂಘಟನೆ ಶ್ರಮ: ಮಹಿಳಾ ಸಮಾವೇಶ

​ಪಕ್ಷ ಸಂಘಟನೆಗೆ ತಾವು ಸಕ್ರಿಯವಾಗಿ ಶ್ರಮ ಹಾಕುವುದಾಗಿ ದೇವೇಗೌಡರು ತಿಳಿಸಿದರು. ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಸಕ್ರಿಯವಾಗಿ ಕೆಲಸ ಮಾಡಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಮೂರು ಸಲ ಚುನಾವಣೆಯಲ್ಲಿ ಸೋತರೂ ಮನೆಯಲ್ಲಿ ಕೂರದೆ ರಾಜ್ಯ ಪ್ರವಾಸ ಮಾಡುತ್ತಾ, ಅನುಭವೀ ರಾಜಕಾರಣಿಯಂತೆ ಸಂಘಟನಾ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

​ಬೆಂಗಳೂರು ನಗರದಲ್ಲಿ ಪಕ್ಷವನ್ನು ಗಟ್ಟಿಯಾಗಿ ಕಟ್ಟುವ ನಿಟ್ಟಿನಲ್ಲಿ ಅಕ್ಟೋಬರ್ 12ರಂದು ಜೆಡಿಎಸ್ ಮಹಿಳಾ ಸಮಾವೇಶವನ್ನು ಆಯೋಜಿಸಲಾಗುವುದು. ಕನಿಷ್ಠ 50,000-60,000 ಮಹಿಳೆಯರು ಭಾಗವಹಿಸಲಿದ್ದಾರೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಕನಿಷ್ಠ 50-60 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಜೆಡಿಎಸ್ ಹೊಂದಿದೆ ಎಂದು ತಿಳಿಸಿದರು.

ಬಿಡದಿ ಟೌನ್‌ಶಿಪ್: ಕಾಲವೇ ನಿರ್ಣಯಿಸುತ್ತದೆ

ಬಿಡದಿ ಟೌನ್‌ಶಿಪ್ ಯೋಜನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಯೋಜನೆ ಬಗ್ಗೆ ನನಗೆ ಎಲ್ಲಾ ಮಾಹಿತಿಯೂ ಇದೆ. ಭೂಸ್ವಾಧೀನಕ್ಕೆ ರೈತರು ವಿರೋಧ ಮಾಡುತ್ತಿದ್ದಾರೆ. ಸರ್ಕಾರ ಕಾಂಗ್ರೆಸ್ ಕೈಯಲ್ಲಿದೆ. ಚುನಾವಣೆ ಬಂದಾಗ ಜನ ತೀರ್ಪು ಕೊಡಬೇಕು, ಅಲ್ಲಿಯವರೆಗೂ ಕಾಯಬೇಕು” ಎಂದರು. “ಮೂರು ತಿಂಗಳ ಹಿಂದೆ ಮಾಧ್ಯಮಗಳು ಬೆಳಗ್ಗೆ ಆರು ಗಂಟೆಯಿಂದ ರಾತ್ರಿ 10 ಗಂಟೆವರೆಗೆ ನಮ್ಮ ಮನೆ ಬಳಿಯೇ ಇರುತ್ತಿದ್ದವು. ಇದು ಯಾರ ಪ್ರೇರಣೆಯಿಂದ? ಅದರ ಹಿಂದೆ ಯಾರ ಶಕ್ತಿ ಇತ್ತು? ನನಗೆ ಗೊತ್ತಿದೆ, ಅದರ ಬಗ್ಗೆ ಚರ್ಚೆ ಬೇಡ. ನಮ್ಮದು ಸಣ್ಣ ರಾಜಕೀಯ ಪಕ್ಷ. ಇರಲಿ, ಎಲ್ಲವನ್ನೂ ಕಾಲವೇ ನಿರ್ಣಯಿಸುತ್ತದೆ” ಎಂದು ಯಾರ ಹೆಸರನ್ನೂ ಹೇಳದೆ ಪರೋಕ್ಷವಾಗಿ ಕುಟುಕಿದರು.

​ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ವಿಧಾನ ಪರಿಷತ್ ಸದಸ್ಯರಾದ ಟಿ. ಜವರಾಯಿ ಗೌಡ, ವಿವೇಕಾನಂದ, ಮಾಜಿ ಎಂಎಲ್‌ಸಿಗಳಾ ಕೆ.ಎ. ತಿಪ್ಪೇಸ್ವಾಮಿ ಸೇರಿದಂತೆ ಹಲವು ಜೆಡಿಎಸ್‌ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *