

ಧಾರವಾಡ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಭುವನೇಶ್ ಪಾಟೀಲ್ ಅವರು ಗುರುವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲಾ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಉಪಸ್ಥಿತರಿದ್ದರು.
ಸಭೆಯಲ್ಲಿ ಸಿಇಒ ಅವರು ಗ್ರಾಮ ಪಂಚಾಯಿತಿಗಳ ವಿದ್ಯುತ್ ಬಿಲ್ ಬಾಕಿ, ಸ್ವಚ್ಛ ಭಾರತ ಮಿಷನ್, ಸಕಾಲ ಸೇವೆಗಳು, ಸಾರ್ವಜನಿಕರ ಕುಂದುಕೊರತೆ ನಿವಾರಣೆ, ತೆರಿಗೆ ವಸೂಲಾತಿ, ಆನ್‌ಲೈನ್ ಸಭೆಗಳ ಜರುಗಿಸುವಿಕೆ, ವಸತಿ ಯೋಜನೆ, 15ನೇ ಹಣಕಾಸು ಯೋಜನೆ, ಮಹಾತ್ಮಾಗಾಂಧಿ ನರೇಗಾ, ಸಾಮಾಜಿಕ ಲೆಕ್ಕ ಪರಿಶೋಧನೆ, ಹಾಗೂ ಬೂದು ನೀರು ನಿರ್ವಹಣೆ ಸೇರಿದಂತೆ ಹತ್ತಾರು ವಿಷಯಗಳ ಕುರಿತು ಚರ್ಚೆ ನಡೆಸಿದರು.
ಕರ ವಸೂಲಾತಿ ಪ್ರಗತಿ ಕುಂಠಿತಕ್ಕೆ ಅಸಮಾಧಾನ:
ಪ್ರಗತಿ ಪರಿಶೀಲನೆಯ ವೇಳೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕರ ಮತ್ತು ಗ್ರಂಥಾಲಯ ಉಪಕರ ವಸೂಲಾತಿಯ ಪ್ರಗತಿ ಕುಂಠಿತಗೊಂಡಿರುವುದಕ್ಕೆ ಸಿಇಒ ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪ್ರಗತಿಯನ್ನು ಸುಧಾರಿಸಲು ಪ್ರತಿ ತಿಂಗಳು ಕನಿಷ್ಠ ಶೇ.10ರಷ್ಟು ಗುರಿ ನಿಗದಿಪಡಿಸಿಕೊಂಡು ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇ-ಸ್ವತ್ತು ಯೋಜನೆಯಡಿ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ 30 ದಿನಗಳಿಗಿಂತಲೂ ಹೆಚ್ಚು ಕಾಲ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿರುವುದಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೆ, ಇ-ಗ್ರಾಮಸ್ವರಾಜ್ ತಂತ್ರಾಂಶದಲ್ಲಿ ಅನುಮೋದಿತ ಕ್ರಿಯಾ ಯೋಜನೆಗಳನ್ನು ಅಳವಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನರೇಗಾ ಯೋಜನೆ, ಬೂದು ನೀರು ನಿರ್ವಹಣೆಗೆ ಒತ್ತು:
ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನೆ, ಒಂಬುಡ್ಸ್‌ಮನ್ ವಸೂಲಾತಿ ಮತ್ತು ಎ.ಟಿ.ಆರ್ ನಮೂದಿಸುವಿಕೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೇ ಇರುವ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಹೆಚ್ಚಿನ ಗಮನ ಹರಿಸಲು ಸೂಚನೆ ನೀಡಿದರು. ಸ್ಥಳೀಯವಾಗಿ ಕೂಲಿಕಾರರಿಗೆ ಕೆಲಸ ಒದಗಿಸುವ ಮೂಲಕ ಪ್ರಗತಿ ಸಾಧಿಸಬೇಕು ಮತ್ತು ಮಹಿಳಾ ಭಾಗವಹಿಸುವಿಕೆ ಪ್ರಮಾಣವನ್ನು ಸರ್ಕಾರದ ನಿರ್ದಿಷ್ಟ ಗುರಿಯಾದ ಶೇ.50ರಷ್ಟು ತಲುಪಲು ಪ್ರಯತ್ನಿಸುವಂತೆ ತಿಳಿಸಿದರು.
ಅದೇ ರೀತಿ, ಬೂದು ನೀರು ನಿರ್ವಹಣೆ ಯೋಜನೆಗಳಿಗೆ ಸಂಬಂಧಿಸಿದಂತೆ ಡಿ.ಪಿ.ಆರ್. (ವಿವರವಾದ ಯೋಜನಾ ವರದಿ) ಗಳನ್ನು ಸಿದ್ಧಪಡಿಸಿ ಸಲ್ಲಿಸಲು ಮತ್ತು ಬಾಕಿ ಇರುವ ಸಾಮಾಜಿಕ ಲೆಕ್ಕ ಪರಿಶೋಧನಾ ಆಕ್ಷೇಪಣೆಗಳನ್ನು ವಸೂಲಿ ಮಾಡಿ ಇತ್ಯರ್ಥಪಡಿಸುವಂತೆ ಸಿಇಒ ಸೂಚಿಸಿದರು. ಹಾಗೂ ಹೊಸ ಕೂಸಿನ ಮನೆಗಳನ್ನು ಆರಂಭಿಸುವಂತೆ ಪಿಡಿಒಗಳಿಗೆ ಸೂಚಿಸಲಾಗಿದ್ದು, ಸಕಾಲದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಹೆಚ್ಚಿನ ಗಮನ ನೀಡುವಂತೆ ಸಿಇಒ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮುಖ್ಯ ಯೋಜನಾ ಅಧಿಕಾರಿ ದೀಪಕ್ ಮಡಿವಾಳ, ಪಿ.ಆರ್.ಇ.ಡಿ. ಕಾರ್ಯಪಾಲಕ ಅಭಿಯಂತರರು, ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಉಪಸ್ಥಿತರಿದ್ದರು.

