
ನೆಲಮಂಗಲ: ಕರ್ತವ್ಯದ ವೇಳೆಯೇ ಧಾರ್ಮಿಕ ಕ್ಷೇತ್ರವಾದ ಸಿದ್ದರಬೆಟ್ಟದಲ್ಲಿ ಗುಂಡು-ತುಂಡಿನ ಪಾರ್ಟಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.
ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಈ ಪ್ರಕರಣದ ಹಿನ್ನೆಲೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರ ಸೂಚನೆ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅವರು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ 10(ಡಿ) ಅಡಿಯಲ್ಲಿ ಅಮಾನತು ಆದೇಶ ಹೊರಡಿಸಿದ್ದಾರೆ.
ನಡತೆ, ಶಿಸ್ತು, ಕರ್ತವ್ಯನಿಷ್ಠೆ ಹಾಗೂ ಸರ್ಕಾರಿ ಸೇವಾ ನಿಯಮಗಳನ್ನು ಪಾಲಿಸದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಮಾನತುಗೊಂಡ ಅಧಿಕಾರಿಗಳಲ್ಲಿ ಶಿವಗಂಗೆ ಗ್ರಾಮ ಪಂಚಾಯಿತಿಯ ಗಿರೀಶ್, ಅಗಳಕುಪ್ಪೆ ಗ್ರಾಮ ಪಂಚಾಯಿತಿಯ ಹರೀಶ್, ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಪ್ರಶಾಂತ್, ಮಣ್ಣೆ ಗ್ರಾಮ ಪಂಚಾಯಿತಿಯ ಚಿರಂಜೀವಿ, ದಾಬಸ್ಪೇಟೆ ಸಮೀಪದ ಸೋಂಪುರ ಗ್ರಾಮ ಪಂಚಾಯಿತಿಯ ರವಿಶಂಕರ್ ಹಾಗೂ ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆ ಗ್ರಾಮ ಪಂಚಾಯಿತಿಯ ದಿನೇಶ್ ಸೇರಿದ್ದಾರೆ.
ಸಿದ್ದರಬೆಟ್ಟದ ಧಾರ್ಮಿಕ ಸ್ಥಳದಲ್ಲಿ ಕರ್ತವ್ಯದ ವೇಳೆಯೇ ಅಧಿಕಾರಿಗಳು ಪಾರ್ಟಿ ನಡೆಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಸರ್ಕಾರ ಶಿಸ್ತು ಕ್ರಮ ಕೈಗೊಂಡಿದೆ.

