ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್: ಮೇ 3 ರಂದು ಧಾರವಾಡದಲ್ಲಿ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ

Spread the love

ಧಾರವಾಡ: ಮಹಾರಾಷ್ಟ್ರದ ಸಾತಾರಾದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಹಿಂದ್ ಕೇಸರಿ’ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯನ್ನು ಮೇ 3 ರಂದು ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ (ಕೆ.ಸಿ.ಡಿ) ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘದ ಅಧ್ಯಕ್ಷ ರತನಕುಮಾರ ಮಠಪತಿ ತಿಳಿಸಿದರು.

​ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 14 ರಿಂದ 17 ರವರೆಗೆ ಸಾತಾರಾದಲ್ಲಿ 52ನೇ ಪುರುಷರ ಹಾಗೂ 4ನೇ ಮಹಿಳಾ ‘ಹಿಂದ್ ಕೇಸರಿ’ ಮತ್ತು ವಿವಿಧ ತೂಕದ ವಿಭಾಗಗಳ ರಾಷ್ಟ್ರೀಯ ಸ್ಪರ್ಧೆಗಳು ನಡೆಯಲಿವೆ. ಈ ಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಬಲಿಷ್ಠ ತಂಡವನ್ನು ಆಯ್ಕೆ ಮಾಡಲು ಮೇ 3 ರಂದು ಬೆಳಿಗ್ಗೆ 10 ರಿಂದ 12 ಗಂಟೆಯವರೆಗೆ ಕುಸ್ತಿ ಪಟುಗಳ ದೇಹತೂಕ ತಪಾಸಣೆ ನಡೆಸಲಾಗುವುದು. ಅಂದೇ ಸಂಜೆ 5 ರಿಂದ 8 ಗಂಟೆಯವರೆಗೆ ಅಂತಿಮ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ವಿವರಿಸಿದರು.

​ರಾಜ್ಯದ ಯಾವುದೇ ಭಾಗದ 18 ವರ್ಷ ಮೇಲ್ಪಟ್ಟ ಕುಸ್ತಿ ಪಟುಗಳು ಈ ಆಯ್ಕೆ ಪ್ರಕ್ರಿಯೆಯಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಒಂದು ವೇಳೆ 18 ವರ್ಷದೊಳಗಿನ ಪ್ರತಿಭಾವಂತ ಪೈಲ್ವಾನರು ಪಾಲ್ಗೊಳ್ಳಲು ಇಚ್ಛಿಸಿದರೆ, ಅವರು ಕಡ್ಡಾಯವಾಗಿ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಪಾಲಕರ ಒಪ್ಪಿಗೆ ಪತ್ರವನ್ನು ತರಬೇಕು ಎಂದು ಮಠಪತಿ ಅವರು ಸ್ಪಷ್ಟಪಡಿಸಿದರು.

​ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ರತ್ನಕುಮಾರ್ ಮಠಪತಿ (9481980689), ಎಂ.ಆರ್. ಶರ್ಮಾ (6360242462) ಅಥವಾ ನಿಂಗರಾಜ ಹಡಪದ (9972842966) ಅವರನ್ನು ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಆರ್. ಶರ್ಮಾ, ಜಿಲ್ಲಾ ಪೈಲ್ವಾನರ ಸಂಘದ ಅಧ್ಯಕ್ಷ ನಿಂಗರಾಜ ಹಡಪದ, ಆನಂದ ಹೊಳೆಹಡಗಲಿ, ರಾಯಪ್ಪ ಬಾಗಲಕೋಟೆ, ನಾಗನಗೌಡ ಪಾಟೀಲ ಹಾಗೂ ಕಲಂದರ್ ಮುಲ್ಲಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *