ಅಂಕೋಲಾದಲ್ಲಿ ಭೂ ಹಗರಣದ ವಾಸನೆ: ನಾಲ್ಕು ದಶಕಗಳ ಹಿಂದೆ ಮೃತಪಟ್ಟ ವ್ಯಕ್ತಿ ‘ಜೀವಂತ’ ಎಂದು ದಾಖಲೆ ತಿದ್ದುಪಡಿ ಮಾಡಿ ಜಮೀನು ಮಾರಾಟ!

Spread the love

ಕಾರವಾರ, ಜೂ. 13: ನಾಲ್ಕು ದಶಕಗಳ ಹಿಂದೆಯೇ ಮೃತಪಟ್ಟ ವ್ಯಕ್ತಿಯನ್ನು ಬದುಕಿದ್ದಾನೆ ಎಂದು ದಾಖಲೆಗಳನ್ನು ತಿದ್ದುಪಡಿ ಮಾಡಿ, ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿರುವ ಆತಂಕಕಾರಿ ಪ್ರಕರಣ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಭೂ ದಾಖಲೆಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಈ ಪ್ರಕರಣವನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿದ್ದು, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.

2026ರ ಫೆಬ್ರವರಿ 26ರಂದು ಅಂಕೋಲಾ ಉಪ ನೋಂದಣಿ ಕಚೇರಿಯಲ್ಲಿ ನಡೆದ ಜಮೀನು ನೋಂದಣಿ ಪ್ರಕ್ರಿಯೆಯ ವೇಳೆ ಈ ಅಕ್ರಮ ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ತಾಲೂಕಿನ ಬೊಗ್ರಿಬೈಲ್ ಗ್ರಾಮದ ಸರ್ವೇ ನಂ. 25, ಹಿಸ್ಸಾ ನಂ. 1ರಲ್ಲಿರುವ 7 ಎಕರೆ 26 ಗುಂಟೆ ಜಮೀನನ್ನು ಶಿವಮೊಗ್ಗ ಮೂಲದ ಶಿವಕುಮಾರ ಮುರಗೇಶ ರಾಮಸ್ವಾಮಿ ಎಂಬವರಿಗೆ ಮಾರಾಟ ಮಾಡಲಾಗಿದೆ.

ಜಮೀನಿನ ಪರಭಾರೆಗಾಗಿ ತಹಸೀಲ್ದಾರ್ ಕಚೇರಿಗೆ ಅರ್ಜಿ ಬಂದಾಗ ಕಂದಾಯ ನಿರೀಕ್ಷಕರಿಗೆ ದಾಖಲೆಗಳ ಕುರಿತು ಅನುಮಾನ ಉಂಟಾಗಿ ಪರಿಶೀಲನೆ ನಡೆಸಿದ ವೇಳೆ ಅಕ್ರಮ ಬೆಳಕಿಗೆ ಬಂದಿದೆ. ಜಮೀನಿನ ಮೂಲ ಮಾಲೀಕರಾಗಿದ್ದ ಒಂಬತ್ತು ಮಂದಿಯ ಹೆಸರಿನಲ್ಲಿ ಮಾರಾಟ ದಾಖಲೆ ಸಿದ್ಧಪಡಿಸಲಾಗಿದ್ದು, ಅವರಲ್ಲಿ ಹಲವರು ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಕುಟುಂಬಸ್ಥರಿಂದ ಬಹಿರಂಗವಾಗಿದೆ.

ಪ್ರಕರಣದಲ್ಲಿ ಮೃತ ವ್ಯಕ್ತಿಗಳ ಹೆಸರಿನಲ್ಲಿ ಆಧಾರ್ ಸೇರಿದಂತೆ ಗುರುತಿನ ದಾಖಲೆಗಳನ್ನು ಸೃಷ್ಟಿಸಿ, ಅವರ ಹೆಸರಿನಲ್ಲಿ ನಕಲಿ ವ್ಯಕ್ತಿಗಳನ್ನು ಸಿದ್ಧಪಡಿಸಿ ನೋಂದಣಿ ಕಚೇರಿಗೆ ಹಾಜರುಪಡಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮುಕುಂದ ನಾರಾಯಣ ಪ್ರಭು, ಹರಿ ಅನಂತ ಪೈ, ರಾಧಾಕೃಷ್ಣ ಮಂಜುನಾಥ ಪೈ ಸೇರಿದಂತೆ ಒಂಬತ್ತು ಮಂದಿಯ ಹೆಸರನ್ನು ದಾಖಲೆಗಳಲ್ಲಿ ಬಳಸಲಾಗಿದೆ. ಇವರಲ್ಲಿ ಕೆಲವರು ಜೀವಂತವಾಗಿದ್ದರೆ, ಕೆಲವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ನಿಜವಾದ ಜಮೀನು ಮಾಲೀಕರು ಯಾರು ಮತ್ತು ದಾಖಲೆಗಳಲ್ಲಿ ಕಾಣಿಸಿಕೊಂಡವರು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಪ್ರಕರಣದ ಮತ್ತೊಂದು ಅಚ್ಚರಿಯ ಅಂಶವೆಂದರೆ, ಮೂಲತಃ ಅಂಕೋಲಾ ಭಾಗದವರಾಗಿರುವ ಜಮೀನು ಮಾಲೀಕರ ಹೆಸರಿನಲ್ಲಿ ವಿಜಯಪುರ ಜಿಲ್ಲೆಯ ವಿಳಾಸಗಳನ್ನು ದಾಖಲಿಸಲಾಗಿದೆ. ಅಂಕೋಲಾ ಮೂಲದ ವ್ಯಕ್ತಿಗಳು ಏಕಾಏಕಿ ಬೇರೆ ಜಿಲ್ಲೆಯ ನಿವಾಸಿಗಳಾಗಿ ದಾಖಲಾಗಿರುವುದು ಅಧಿಕಾರಿಗಳ ಗಮನಕ್ಕೆ ಬಾರದೆ ಹೇಗೆ ನೋಂದಣಿ ನಡೆದಿದೆ ಎಂಬ ಪ್ರಶ್ನೆಯೂ ಮೂಡಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಅಕ್ರಮದ ಹಿಂದೆ ಸಂಘಟಿತ ಜಾಲ ಕಾರ್ಯನಿರ್ವಹಿಸಿರುವ ಶಂಕೆ ವ್ಯಕ್ತವಾಗಿದೆ. ಆಧಾರ್ ಸೇರಿದಂತೆ ವಿವಿಧ ಗುರುತಿನ ದಾಖಲೆಗಳನ್ನು ಸೃಷ್ಟಿಸುವುದರಿಂದ ಹಿಡಿದು, ದಾಖಲೆಗಳಿಗೆ ಹೊಂದುವಂತೆ ವ್ಯಕ್ತಿಗಳನ್ನು ಸಿದ್ಧಪಡಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಇದೇ ವೇಳೆ, ಜಮೀನಿನ ಮಾಲೀಕರ ಪರಿಚಯವಿದೆ ಎಂದು ಪ್ರಮಾಣೀಕರಿಸುವ ಕಾಲಂನಲ್ಲಿ ಮಾರುತಿ ಬೆಚ್ಚುಗೌಡ ಹಾಗೂ ಸಂತೋಷ ಬುದ್ದುಗೌಡ ಎಂಬವರು ಸಹಿ ಹಾಕಿರುವುದು ತನಿಖೆಗೆ ಹೊಸ ಆಯಾಮ ನೀಡಿದೆ. ಅವರು ನಿಜವಾದ ಮಾಲೀಕರನ್ನು ಗುರುತಿಸಿ ಸಹಿ ಹಾಕಿದ್ದಾರೆಯೇ ಅಥವಾ ತಪ್ಪು ಮಾಹಿತಿ ಆಧರಿಸಿ ಪ್ರಮಾಣೀಕರಿಸಿದ್ದಾರೆಯೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

ಪ್ರಕರಣದ ಹಿಂದೆ ಇರುವ ವ್ಯಕ್ತಿಗಳು ಯಾರು, ನಕಲಿ ದಾಖಲೆಗಳನ್ನು ಸೃಷ್ಟಿಸಿದವರು ಯಾರು ಹಾಗೂ ಸರ್ಕಾರಿ ವ್ಯವಸ್ಥೆಯ ಯಾವ ಹಂತದಲ್ಲಿ ಲೋಪ ಉಂಟಾಗಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ಅಚ್ಚರಿಯ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.

“ಈ ಜಮೀನು ನೋಂದಣಿ ಪ್ರಕರಣ ನಮ್ಮ ಗಮನಕ್ಕೆ ಬಂದ ತಕ್ಷಣವೇ ಮುಂದಿನ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ. ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಅವರ ಮಾರ್ಗದರ್ಶನದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅಂಕೋಲಾ ತಹಸೀಲ್ದಾರ್ ನಿಶ್ಚಲ ನೊರೋನಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *