
ಭಟ್ಕಳ: ಕಾಲೇಜು ಶುಲ್ಕ ಪಾವತಿಸಲು ತಂದೆ ನೀಡಿದ್ದ 10 ಸಾವಿರ ರೂಪಾಯಿ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿ, ಆತ ಹಣವನ್ನು ಮರಳಿ ನೀಡದೆ ವಂಚಿಸಿದ ಹಿನ್ನೆಲೆಯಲ್ಲಿ ಮನನೊಂದ ಬಿಸಿಎ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಶನಿವಾರದಂದು ನಡೆದಿದೆ.
ಭಟ್ಕಳದ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಗಾಯತ್ರಿಯ ತಂದೆ ನಾಗರಾಜ ಅವರು ಮಗಳ ಕಾಲೇಜು ಶುಲ್ಕ ಪಾವತಿಸಲು 10 ಸಾವಿರ ರೂಪಾಯಿ ಹಣ ನೀಡಿದ್ದರು. ಇದೇ ವೇಳೆ ಗ್ರಾಮದ ಪರಿಚಯಸ್ಥನಾಗಿದ್ದ ಸಂತೋಷ್ ಎಂಬಾತ ತನಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಹೇಳಿ ಗಾಯತ್ರಿಯ ಬಳಿ ಹಣ ಕೇಳಿದ್ದಾನೆ.
ನಿಗದಿತ ಅವಧಿಯೊಳಗೆ ಹಣವನ್ನು ಮರಳಿ ನೀಡುವುದಾಗಿ ಭರವಸೆ ನೀಡಿದ್ದರಿಂದ ಆತನ ಮಾತು ನಂಬಿದ ಗಾಯತ್ರಿ, ತಂದೆ ನೀಡಿದ್ದ 10 ಸಾವಿರ ರೂಪಾಯಿಗಳನ್ನು ಸಂತೋಷ್ಗೆ ಸಾಲವಾಗಿ ನೀಡಿದ್ದಾಳೆ. ಆದರೆ ಕಾಲೇಜು ಶುಲ್ಕ ಪಾವತಿಸಬೇಕಾದ ಸಮಯ ಸಮೀಪಿಸಿದರೂ ಸಂತೋಷ್ ಹಣವನ್ನು ಹಿಂದಿರುಗಿಸದೆ ಸತಾಯಿಸಿದ್ದಾನೆ ಎನ್ನಲಾಗಿದೆ.
ಇದರಿಂದ ಗಾಯತ್ರಿಗೆ ಕಾಲೇಜಿನಲ್ಲಿ ಸಮಯಕ್ಕೆ ಸರಿಯಾಗಿ ಶುಲ್ಕ ಪಾವತಿಸಲು ಸಾಧ್ಯವಾಗಿರಲಿಲ್ಲ. ಶುಲ್ಕ ಪಾವತಿಸದ ಕಾರಣ ಕಾಲೇಜು ಆಡಳಿತ ಮಂಡಳಿ ಆಕೆಗೆ ಪರೀಕ್ಷೆಯ ಹಾಲ್ಟಿಕೆಟ್ ನೀಡಲು ನಿರಾಕರಿಸಿದೆ. ಹಲವು ವರ್ಷಗಳ ಶ್ರಮದ ಬಳಿಕ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿಲ್ಲ ಎಂಬ ತೀವ್ರ ಮಾನಸಿಕ ಬೇಸರ ಮತ್ತು ಆಘಾತಕ್ಕೆ ಒಳಗಾದ ಗಾಯತ್ರಿ, ಮನನೊಂದು ಗ್ರಾಮದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿನಿಯ ಸಾವಿನ ಹಿನ್ನೆಲೆ ಹಾಗೂ ಹಣಕಾಸಿನ ವ್ಯವಹಾರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿದ್ಯಾರ್ಥಿನಿಯ ಸಾವಿಗೆ ಕಾರಣವಾದ ಆರೋಪದಡಿ ಸಂತೋಷ್ ವಿರುದ್ಧವೂ ತನಿಖೆ ಚುರುಕುಗೊಂಡಿದೆ.

