
ಧಾರವಾಡ ಏ.27: ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸುವ ಬೇಡಿಕೆ ಇತ್ತು. ಈಗ ಕಾರ್ಯರೂಪಕ್ಕೆ ಬರುತ್ತಿದೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಲ್ಹಾದ ಜೋಶಿ ಅವರು ಹೇಳಿದರು.
ಅವರು ಸೋಮವಾರದಂದು (ಏ. 27) ಮಧ್ಯಾಹ್ನ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದಲ್ಲಿನ ಸರ್ಕಾರಿ ಆರೋಗ್ಯ ಕೇಂದ್ರದ ಆವರಣದಲ್ಲಿರುವ ಅಮ್ಮಿನಬಾವಿ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಿ, ಮಾತನಾಡಿದರು.
ಕೇವಲ ಕಟ್ಟಡ ನಿರ್ಮಾಣವೇ ಅಭಿವೃದ್ಧಿ ಅಲ್ಲ. ಅದರ ಜೊತೆಗೆ ಆಸ್ಪತ್ರೆಗಳಲ್ಲಿ ಸಮರ್ಪಕ ವೈದ್ಯರು, ಸಿಬ್ಬಂದಿ ಮತ್ತು ಔಷಧಿಗಳ ಲಭ್ಯತೆಗಳನ್ನು ಸರಿಯಾಗಿ ಸಾರ್ವಜನಿಕರಿಗೆ ನೀಡಿದಾಗ ಮಾತ್ರ ಅದು ಅಭಿವೃದ್ಧಿ ಅನಿಸಿಕೊಳ್ಳುತ್ತದೆ ಎಂದು ಅವರು ಹೇಳಿದರು.
ಭಾರತವು 140 ಕೋಟಿ ಜನಸಂಖ್ಯೆಯ ದೇಶವಾಗಿದ್ದು, ಯುವಜನರ ಪ್ರಮಾಣ ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿ ಸೇವಾ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಭಾರತ ವಿಶ್ವಾಸಾರ್ಹ ದೇಶವಾಗಿ ಹೊರಹೊಮ್ಮುತ್ತಿದೆ. ಮತ್ತು ಮಧುಮೇಹ, ಕ್ಯಾನ್ಸರ್ ಹಾಗೂ ಅತಿಯಾದ ತೂಕ (ಒಬೆಸಿಟಿ) ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯತೆಯೂ ಇದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ವೈದ್ಯರ ಕೊರತೆಯನ್ನು ನೀಗಿಸಲು ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚಿಸಲಾಗಿದ್ದು, ತರಬೇತಿ ಹೊಂದಿದ ವೈದ್ಯರ ಸಂಖ್ಯೆಯನ್ನು 51,000 ರಿಂದ 1.31 ಲಕ್ಷಕ್ಕೆ ಏರಿಕೆಯಾಗಲು ಕ್ರಮವಹಿಸಲಾಗಿದೆ. ಜೊತೆಗೆ, ಬೇಡಿಕೆಗೆ ಅನುಗುಣವಾಗಿ ಹೊಸ ಮಾದರಿಯಲ್ಲಿ ತಜ್ಞ ವೈದ್ಯರನ್ನು ಆಸ್ಪತ್ರೆಗಳಿಗೆ ನೇಮಿಸುವ ಯೋಜನೆಯೂ ಜಾರಿಯಲ್ಲಿದೆ ಎಂದು ಅವರು ಹೇಳಿದರು.
ಆಯುμÁ್ಮನ್ ಭಾರತ ಮತ್ತು ಇತರ ಯೋಜನೆಯಡಿ ಜನರಿಗೆ ಉಚಿತ ಅಥವಾ ಕಡಿಮೆ ವೆಚ್ಚದ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ. ಅಂಗವಿಕಲರು ಮತ್ತು ವೃದ್ಧರಿಗೆ ಸಹಾಯವಾಗುವ ಅಲಿಂಕೊ ಕೇಂದ್ರವನ್ನು ಹುಬ್ಬಳ್ಳಿಯ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ ಗುಂಡೂರಾವ್ ಅವರು ಮಾತನಾಡಿ, ಹೊಸ ಸಮುದಾಯ ಆರೋಗ್ಯ ಕೇಂದ್ರವು ಇಂದು ಲೋಕಾರ್ಪಣೆಗೊಂಡಿದ್ದು, ಈ ಪ್ರದೇಶದ ಜನರಿಗೆ ಹತ್ತಿರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗಳು ಲಭ್ಯವಾಗಲಿವೆ. ಇದೀಗ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಮುಕ್ತವಾಗಿದೆ ಎಂದು ಅವರು ಹೇಳಿದರು.
ಈ ಕೇಂದ್ರದಲ್ಲಿ ತಜ್ಞ ವೈದ್ಯರು, ವೈದ್ಯಾಧಿಕಾರಿಗಳು ಹಾಗೂ ವಿಶೇಷವಾಗಿ ಸ್ತ್ರೀರೋಗ, ಮಕ್ಕಳ ಹಾಗೂ ಅರವಳಿಕೆ ತಜ್ಞರನ್ನು ನಿಯೋಜಿಸುವ ಯೋಜನೆ ಇದೆ. ಇದರಿಂದ ಜಿಲ್ಲಾ ಆಸ್ಪತ್ರೆಗೆ ಹೋಗುವ ಅಗತ್ಯ ಕಡಿಮೆಯಾಗುತ್ತದೆ, ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಿನ ಚಿಕಿತ್ಸೆ ಸಿಗಲಿದೆ ಎಂದು ಅವರು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್, ಹೃದಯಾಘಾತ, ಮಧುಮೇಹ, ರಕ್ತದೊತ್ತಡ ಹಾಗೂ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವುದಕ್ಕೆ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಪರಿಸರ ಕಾರಣಗಳಾಗಿವೆ ಆದ್ದರಿಂದ ರೋಗ ಬಂದ ಬಳಿಕ ಚಿಕಿತ್ಸೆಗಿಂತ, ರೋಗ ಬರದ ಹಾಗೆ ಮುಂಜಾಗ್ರತೆಯಿಂದ ಇರುವುದು, ಉತ್ತಮವಾದ ಆಹಾರವನ್ನು ಸೇವನೆ ಮಾಡುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು.

ಗೃಹ ಆರೋಗ್ಯ ಯೋಜನೆಯಲ್ಲಿ ಮನೆಗಳಿಗೆ ಭೇಟಿ ನೀಡಿ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಕಾಯಿಲೆಗಳ ತಪಾಸಣೆ ನಡೆಸಲಾಗಿದೆ. ಕೆಲವು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಇರುವ ಸಂಭಾವ್ಯತೆ ಕಂಡುಬಂದಿದೆ. ಹಲವು ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪರೀಕ್ಷೆಗೆ ರೆಫರ್ ಮಾಡಲಾಗಿದೆ. ಹಾಗೂ ಸುಮಾರು ಜನರಿಗೆ ಅನೀಮಿಯಾ ಸಹ ಪತ್ತೆಯಾಗಿದೆ. ಈ ಯೋಜನೆಯಡಿ ಉಚಿತ ಚಿಕಿತ್ಸೆ ಹಾಗೂ ದೀರ್ಘಕಾಲಿಕ ಔಷಧಿ ವಿತರಣೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಡಾ. ಪುನೀತ್ ರಾಜಕುಮಾರ ಯೋಜನೆ ಮೂಲಕ ಹೃದಯಾಘಾತದ ತುರ್ತು ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗಳಲ್ಲಿ ಇಸಿಜಿ ಪರೀಕ್ಷೆ ಹಾಗೂ ತಕ್ಷಣದ ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ. ಕೇವಲ 10 ನಿಮಿಷಗಳಲ್ಲಿ ತಜ್ಞರ ಸಲಹೆ ಪಡೆದು ರೋಗಿಗೆ ಚಿಕಿತ್ಸೆ ನೀಡುವ ಮೂಲಕ ಅನೇಕ ಜೀವಗಳನ್ನು ಉಳಿಸಲಾಗಿದೆ ಎಂದು ಆರೋಗ್ಯ ಸಚಿವರ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರದಿಂದ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಕ್ಯಾನ್ಸರ್ ರೋಗಿಗಳಿಗೆ ಸ್ಥಳೀಯ ಮಟ್ಟದಲ್ಲೇ ಚಿಕಿತ್ಸೆ ಲಭ್ಯವಾಗುತ್ತಿದೆ. ಒಟ್ಟಾರೆ, ಈ ಹೊಸ ಆರೋಗ್ಯ ಕೇಂದ್ರ ಮತ್ತು ವಿವಿಧ ಯೋಜನೆಗಳು ಗ್ರಾಮೀಣ ಪ್ರದೇಶದ ಜನರಿಗೆ ಸುಲಭ, ಕಡಿಮೆ ವೆಚ್ಚದ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಅಡಿವೇಶ ಗಿರೆಪ್ಪಾ ಇಟಗಿ, ಮಾಜಿ ಶಾಸಕರಾದ ಅಮೃತ್ ದೇಸಾಯಿ, ಸೀಮಾ ಮಸೂತಿ, ವಿಭಾಗಿಯ ಜಂಟಿ ನಿರ್ದೇಶಕಿ ಪುಷ್ಪಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸಂಗಪ್ಪ ಗಾಬಿ, ತಹಸಿಲ್ದಾರ್ ಡಾ. ಡಿ.ಹೆಚ್.ಹೂಗಾರ, ಅನಿಲಕುಮಾರ್ ಪಾಟೀಲ, ಸಮಾಜದ ಮುಖಂಡರು ಮತ್ತು ಊರಿನ ಮುಖಂಡರುಗಳು ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಮ್.ಹೊನಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಇಲಾಖೆ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಭಾಗವಹಿಸಿದ್ದರು.

