
ಕುಂದಗೋಳ: ತಾಲ್ಲೂಕಿನ ಹಿರೇಹರಕುಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಂತಾ ಹೂಗಾರ ಅವರನ್ನು ಏಕಾಏಕಿ ಅಮಾನತು ಮಾಡಿರುವುದನ್ನು ಖಂಡಿಸಿ ಶಾಲಾ ಆವರಣದಲ್ಲಿ ಬುಧವಾರ ವಿದ್ಯಾರ್ಥಿಗಳು, ಪಾಲಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು. ನೆಚ್ಚಿನ ಶಿಕ್ಷಕಿಯ ಅಮಾನತಿನಿಂದ ಆಕ್ರೋಶಗೊಂಡ ನೂರಾರು ಗ್ರಾಮಸ್ಥರು ಶಾಲಾ ಆವರಣದಲ್ಲಿ ಜಮಾಯಿಸಿದ್ದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಶಾಂತಾ ಹೂಗಾರ ಅವರನ್ನು ಮರಳಿ ತಮ್ಮ ಶಾಲೆಗೆ ನಿಯೋಜನೆ ಮಾಡಬೇಕು ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ರಾತ್ರಿಯವರೆಗೂ ಧರಣಿ ಮುಂದುವರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕುಂದಗೋಳ ಬಿಇಒ ಮಹಾದೇವಿ ಮಾಡಲಗೇರಿ ಅವರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಿಗೆ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ, ಮುಖ್ಯ ಶಿಕ್ಷಕಿಯನ್ನು ಯಾವ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂಬುದಕ್ಕೆ ಸ್ಪಷ್ಟ ಕಾರಣ ನೀಡಲು ಅವರು ವಿಫಲರಾದರು. ಒಂದು ಹಂತದಲ್ಲಿ ಶಾಸಕರ ಸೂಚನೆಯ ಮೇರೆಗೆ ಅಮಾನತು ಮಾಡಲಾಗಿದೆ ಎಂದು ಬಿಇಒ ಸಮರ್ಥಿಸಲು ಮುಂದಾದರು. ಇದರಿಂದ ಜಾಗೃತರಾದ ಗ್ರಾಮಸ್ಥರು ಸ್ಥಳದಲ್ಲೇ ಶಾಸಕ ಎಂ.ಆರ್. ಪಾಟೀಲ ಅವರಿಗೆ ದೂರವಾಣಿ ಕರೆ ಮಾಡಿ ಸ್ಪಷ್ಟನೆ ಕೋರಿದರು.
ಈ ವೇಳೆ ಶಾಸಕ ಎಂ.ಆರ್. ಪಾಟೀಲ ಅವರು, “ನಾನು ಅಮಾನತು ಮಾಡಲು ಹೇಳಿಲ್ಲ” ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಬಿಇಒ ಅವರಿಗೆ ಫೋನ್ ನೀಡುವಂತೆ ಸೂಚಿಸಿದರು. ನಂತರ ಬಿಇಒ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, “ನಾನೆಲ್ಲಿ ಅಮಾನತು ಮಾಡಲು ಹೇಳಿದ್ದೇನೆ?” ಎಂದು ಪ್ರಶ್ನಿಸಿದರು. ಇದಕ್ಕೆ ಬಿಇಒ ಮಹಾದೇವಿ ಮಾಡಲಗೇರಿ ಅವರು ಮತ್ತೆ ತಮ್ಮ ಹೇಳಿಕೆ ಬದಲಿಸಿ, “ಮೇಲಾಧಿಕಾರಿಗಳ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ” ಎಂದು ಉತ್ತರ ನೀಡಿದರು. ಈ ದ್ವಂದ್ವ ಹೇಳಿಕೆಯಿಂದ ಪ್ರತಿಭಟನಾಕಾರರ ಆಕ್ರೋಶ ಮತ್ತಷ್ಟು ಹೆಚ್ಚಾಯಿತು.

ಈ ಕುರಿತು ಮಾತನಾಡಿದ ಗ್ರಾಮದ ಹಿರಿಯರಾದ ಸತೀಶ ಕೊಬ್ಬಯ್ಯನವರ ಹಾಗೂ ವೆಂಕನಗೌಡ ಪಾಟೀಲ್ ಸೇರಿದಂತೆ ಹಲವರು, ಸುತ್ತಮುತ್ತಲಿನ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಶಾಂತಾ ಹೂಗಾರ ಅವರು ವಿಶೇಷ ಶ್ರಮವಹಿಸಿ ಹಿರೇಹರಕುಣಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುವಂತೆ ಮಾಡಿದ್ದಾರೆ ಎಂದು ಹೇಳಿದರು. ಇಂತಹ ಶಿಕ್ಷಕಿಯನ್ನು ಅಮಾನತು ಮಾಡಿರುವುದು ಅನ್ಯಾಯ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇನ್ನು ವಿದ್ಯಾರ್ಥಿಗಳು , “ನಮ್ಮ ಹೂಗಾರ ಟೀಚರ್ ಅವರೇ ನಮಗೆ ಬೇಕು. ಅವರು ತಮ್ಮ ಸ್ವಂತ ಖರ್ಚಿನಲ್ಲಿ ಬಟ್ಟೆ, ಬ್ಯಾಗ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿ ಪ್ರೀತಿಯಿಂದ ಕಲಿಸುತ್ತಾರೆ. ಅವರು ಮರಳಿ ಬರುವವರೆಗೂ ನಾವು ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಹಾಗೂ ಶಾಲೆಗೆ ಹಾಜರಾಗುವುದಿಲ್ಲ” ಎಂದು ಹಠ ಹಿಡಿದರು. ಪಾಲಕರು ಸಹ ವಿದ್ಯಾರ್ಥಿಗಳ ನಿರ್ಧಾರಕ್ಕೆ ಬೆಂಬಲ ಸೂಚಿಸಿ, ಶಿಕ್ಷಕಿ ಮರಳಿ ಬರುವವರೆಗೂ ಮಕ್ಕಳಿಗೆ ಮನೆಯಲ್ಲೇ ಪಾಠ ಹೇಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಾಲೆಯ ಹಳೆಯ ವಿದ್ಯಾರ್ಥಿ ಕೊಟೇಶ ಲಮಾಣಿ ಅವರು ದೂರವಾಣಿ ಮೂಲಕ ತಹಶೀಲ್ದಾರರೊಂದಿಗೆ ಮಾತನಾಡಿ, “ನಾನು ಇಂದು ವಿಜ್ಞಾನಿಯಾಗಲು ಹೂಗಾರ ಟೀಚರ್ ಅವರೇ ಕಾರಣ. ಅಂತಹ ಶಿಕ್ಷಕಿಯನ್ನು ಅಮಾನತು ಮಾಡಿರುವುದು ತುಂಬಾ ನೋವು ತಂದಿದೆ. ದಯವಿಟ್ಟು ಅವರನ್ನು ಮರಳಿ ಅದೇ ಶಾಲೆಗೆ ನಿಯೋಜಿಸಿ” ಎಂದು ಮನವಿ ಮಾಡಿದರು.
ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ತಹಶೀಲ್ದಾರ್ ರಾಜು ಮಾವರಕರ್ ಅವರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಅವರಿಂದ ಸಂಪೂರ್ಣ ಮಾಹಿತಿ ಮತ್ತು ದೂರುಗಳನ್ನು ಆಲಿಸಿದ ತಹಶೀಲ್ದಾರರು, ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯನ್ನು ಮರಳಿ ಶಾಲೆಗೆ ನಿಯೋಜಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ತಹಶೀಲ್ದಾರರ ಸಕಾರಾತ್ಮಕ ಆಶ್ವಾಸನೆಯ ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

