
ಹನೂರು, ಸೆ.22: ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಹುಂಡಿ ಎಣಿಕೆ ಕಾರ್ಯ ಸೋಮವಾರ (ಸೆ.22) ನೆರವೇರಿತು. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಈ ಬಾರಿ ಹುಂಡಿ ಸಂಗ್ರಹದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ.
ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಜಿ. ಪುರುಷೋತ್ತಮ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಹುಂಡಿ ಎಣಿಕೆ ಕಾರ್ಯ ಆರಂಭಿಸಲಾಯಿತು.
ಎಣಿಕೆ ಕಾರ್ಯದಲ್ಲಿ ಒಟ್ಟು ₹2,21,65,915 ಹಣ ಸಂಗ್ರಹವಾಗಿದ್ದು, ಇದರಲ್ಲಿ ಇ-ಹುಂಡಿ ಮೂಲಕ ಭಕ್ತರು ಸಲ್ಲಿಸಿದ ಕಾಣಿಕೆಯ ಮೊತ್ತವೂ ಸೇರಿದೆ. ಇದರೊಂದಿಗೆ ಭಕ್ತರು 68 ಗ್ರಾಂ 500 ಮಿಲಿಗ್ರಾಂ ಚಿನ್ನ ಹಾಗೂ 1 ಕೆಜಿ 913 ಗ್ರಾಂ ಬೆಳ್ಳಿಯನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಹುಂಡಿ ಎಣಿಕೆ ಸಂದರ್ಭದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಮರಿಸ್ವಾಮಿ ಕಾಗಲವಾಡಿ, ಗಂಗನ ತಿಮ್ಮಯ್ಯ ಮೆಲ್ಲಹಳ್ಳಿ, ಮಹದೇವಪ್ಪ ಬಿ. ಕೀಳನಪುರ, ಭಾಗ್ಯಮ್ಮ ಕುಪ್ಯಾ, ಆರ್.ಎಸ್. ಕುಮಾರ ವಿಜಯ ರಾವಂದೂರು, ಹಣಕಾಸು ಲೆಕ್ಕಪತ್ರ ಸಲಹೆಗಾರ ಮಹದೇವ ಸಿ., ಉಪಕಾರ್ಯದರ್ಶಿ ಜಿ.ಎಲ್. ಚಂದ್ರಶೇಖರ್, ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯ ವಿಷಯ ನಿರ್ವಾಹಕಿ ಕಲ್ಯಾಣಮ್ಮ, ಬ್ಯಾಂಕ್ ಆಫ್ ಬರೋಡ ಕೊಳ್ಳೇಗಾಲ ಶಾಖೆಯ ವ್ಯವಸ್ಥಾಪಕ ರವಿಶಂಕರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಪ್ರಾಧಿಕಾರದ ಸಿಬ್ಬಂದಿಗಳಾದ ಇಂದ್ರೇಶ್, ಸರಗೂರು ಮಹದೇವಸ್ವಾಮಿ, ಜನಾರ್ಧನ್, ವೆಂಕಟಾಚಾರಿ, ಧನಕೋಟಿ, ಮಾಧರಾಜ್ ಅರಸು, ಪಾರುಪತ್ತೆದಾರ್ ಮಾದೇಶ್, ಸೆಕ್ಯುರಿಟಿ ಸೂಪರ್ವೈಸರ್ ಮಾದೇಶ್, ಸಿದ್ದಲಿಂಗ ಸೇರಿದಂತೆ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಹುಂಡಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡರು.
. ವರದಿ ಕಾರ್ತಿಕ್ ಗೌಡ ಹನೂರು.

