ಗುರುವಾರ, 26 Nov 2026 | ಕರ್ನಾಟಕ & ರಾಷ್ಟ್ರೀಯ ಸುದ್ದಿ ಪೋರ್ಟಲ್
ಗುರುವಾರ, 26 Nov 2026 ವಿಶ್ವಾಸಾರ್ಹ ಕನ್ನಡ & ರಾಷ್ಟ್ರೀಯ ಸುದ್ದಿ ಜಾಲ
Karnataka

ಸಂವಿಧಾನದ ಆಶಯಗಳ ಸಾಕಾರಕ್ಕೆ ಎಲ್ಲರೂ ಕೈ ಜೋಡಿಸೋಣ : ಶಾಸಕ ಎಚ್.ಕೆ. ಪಾಟೀಲ

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ಸಂವಿಧಾನದ ಆಶಯಗಳ ಸಾಕಾರಕ್ಕೆ ಎಲ್ಲರೂ ಕೈ ಜೋಡಿಸೋಣ : ಶಾಸಕ ಎಚ್.ಕೆ. ಪಾಟೀಲ
  • Spread the loveಗದಗ: “ಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸೇರಿದ್ದು. ಸಮಾಜದಲ್ಲಿ ಶಾಂತಿ, ಸುರಕ್ಷತೆ ಹಾಗೂ…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:
Spread the love

ಗದಗ: “ಸಂವಿಧಾನವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸೇರಿದ್ದು. ಸಮಾಜದಲ್ಲಿ ಶಾಂತಿ, ಸುರಕ್ಷತೆ ಹಾಗೂ ಸುವ್ಯವಸ್ಥೆ ನೆಲೆಸಲು ಸಂವಿಧಾನವೇ ಪ್ರಮುಖ ಆಧಾರವಾಗಿದೆ. ಹೀಗಾಗಿ ಸಂವಿಧಾನದ ಆಶಯಗಳನ್ನು ಅರಿತು, ಅವುಗಳ ಸಾಕಾರಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು” ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
“ಸಂವಿಧಾನದ ಮೂಲಕ ಹೆಚ್ಚಿನ ಪ್ರಯೋಜನ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿದವರೇ ಸಂವಿಧಾನ ದಿನಾಚರಣೆಯಿಂದ ದೂರ ಉಳಿಯುತ್ತಿರುವುದು ಖೇದಕರ ಹಾಗೂ ವಿಷಾದನೀಯ ಸಂಗತಿಯಾಗಿದೆ. ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಸಂವಿಧಾನ ದಿನಾಚರಣೆ ಕೇವಲ ಸಮಾಜ ಕಲ್ಯಾಣ ಇಲಾಖೆಗೆ ಸೀಮಿತವಾಗಬಾರದು. ಕಾನೂನು ಇಲಾಖೆಯೂ ಸಕ್ರಿಯವಾಗಿ ಭಾಗವಹಿಸಿ ಮುಂದಿನ ದಿನಗಳಲ್ಲಿ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು” ಎಂದು ಅಭಿಪ್ರಾಯಪಟ್ಟರು.
“ಜಗತ್ತಿನ ವಿವಿಧ ರಾಷ್ಟ್ರಗಳ ಸಂವಿಧಾನಗಳ ಸರಾಸರಿ ಬಾಳಿಕೆ ಸುಮಾರು 19 ವರ್ಷಗಳಷ್ಟಿದೆ. ಆದರೆ, ಭಾರತದ ಸಂವಿಧಾನವು 77 ವರ್ಷಗಳಾದರೂ ಸದೃಢವಾಗಿ, ಬಲಿಷ್ಠವಾಗಿ ಮುನ್ನಡೆಯುತ್ತಿದೆ. ಇದು ನಮ್ಮ ಸಂವಿಧಾನದ ಶ್ರೇಷ್ಠತೆ ಮತ್ತು ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಸಂವಿಧಾನವು ಕೇವಲ ಆಡಳಿತಾತ್ಮಕ ಕಾನೂನು ದಾಖಲೆಯಲ್ಲ, ಅದೊಂದು ಸಾಮಾಜಿಕ ಕೃತಿಯಾಗಿದೆ. ಭಾರತೀಯರಾದ ನಾವೆಲ್ಲರೂ ಒಂದೇ ಎಂಬ ರಾಷ್ಟ್ರೀಯ ಭಾವನೆ ಮೂಡಿಸುವ ಶಕ್ತಿ ಸಂವಿಧಾನಕ್ಕಿದೆ” ಎಂದು ಅವರು ಹೇಳಿದರು.
“ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಅಸ್ಪೃಶ್ಯತೆ ಸೇರಿದಂತೆ ಹಲವು ಸಾಮಾಜಿಕ ಅಸಮಾನತೆಗಳು ವ್ಯಾಪಕವಾಗಿ ನೆಲೆಸಿದ್ದವು. ಸಂವಿಧಾನ ಜಾರಿಯಾದ ನಂತರ ಸಮಾಜದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿವೆ. ಪ್ರತಿಯೊಬ್ಬರಿಗೂ ಸಮಾನ ಹಕ್ಕು, ಅವಕಾಶ ಮತ್ತು ಗೌರವ ದೊರೆಯಲು ಸಂವಿಧಾನ ದಾರಿದೀಪವಾಗಿದೆ. ಸಂವಿಧಾನದ ಆಶಯಗಳ ಮೇಲೆ ಎಲ್ಲರಿಗೂ ಪ್ರೀತಿ ಮತ್ತು ಗೌರವ ಇರಬೇಕು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾನತೆಯ ಸಮಾಜ ನಿರ್ಮಿಸಬೇಕು” ಎಂದರು.

ಹಕ್ಕು, ಕರ್ತವ್ಯ ನಿರ್ಧರಿಸಿರುವ ಮಾರ್ಗಸೂಚಿ:
ಎಚ್‌ಸಿಇಎಸ್‌ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಉಪನ್ಯಾಸಕ ಡಿ.ಜಿ.ಜೋಗಣ್ಣನವರ ಮಾತನಾಡಿ, “ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಸಹೋದರತ್ವದ ಹಕ್ಕುಗಳನ್ನು ಕಲ್ಪಿಸಿಕೊಟ್ಟಿದೆ. ಸಂವಿಧಾನವು ಕೇವಲ ಆಡಳಿತ ನಡೆಸುವ ಮಾರ್ಗಸೂಚಿಯಲ್ಲ, ಬದಲಾಗಿ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ಧರಿಸುವ ಮಹತ್ವದ ಕಾನೂನು ಗ್ರಂಥವಾಗಿದೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
“ವಿದ್ಯಾರ್ಥಿಗಳು ಸಂವಿಧಾನದ ಮೂಲ ಆಶಯಗಳು, ಮೂಲಭೂತ ಹಕ್ಕುಗಳು ಹಾಗೂ ಮೂಲಭೂತ ಕರ್ತವ್ಯಗಳ ಕುರಿತು ಅರಿವು ಹೊಂದಬೇಕು. ದೇಶದ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ಸಂವಿಧಾನದ ಮೌಲ್ಯಗಳನ್ನು ಗೌರವಿಸುವುದು ಅತ್ಯಂತ ಅಗತ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಮಹತ್ವ, ಕಾನೂನಿನ ಗೌರವ, ಸಾರ್ವಜನಿಕ ಆಸ್ತಿಯ ರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಅರಿತು ನಡೆಯಬೇಕು” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಷರೀಷ್ ಬಿಳಿಯಲಿ ಹಾಗೂ ತಂಡದವರು ಸಂವಿಧಾನ ಜಾಗೃತಿ ಗೀತೆಯನ್ನು ಪ್ರಸ್ತುತಪಡಿಸಿದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಅಪರ ಜಿಲ್ಲಾಧಿಕಾರಿ
ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಎಸ್.ಎನ್. ಬಳ್ಳಾರಿ, ಬಸವರಾಜ ಕಡೇಮನಿ, ಪ್ರೊ. ಸಂಗಮೇಶ್, ಅನಂತ ಸಿಂಗಾಡಿ, ಮಾರ್ತಾಂಡಪ್ಪ ಹಾದಿಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ADVERTISEMENT