ಚಿಕ್ಕಬಳ್ಳಾಪುರ: ಹಬ್ಬ-ಹರಿದಿನಗಳಲ್ಲಿ ದೇವರ ಮುಡಿ ಏರಬೇಕಿದ್ದ ಹೂವುಗಳು ಇಂದು ಮಾರುಕಟ್ಟೆಯ ಬೀದಿಯಲ್ಲಿ ಬಿದ್ದಿವೆ. ಮಳೆ ಹಾಗೂ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ತೀವ್ರವಾಗಿ ಕುಸಿದಿರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಹೂ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಷ್ಟಪಟ್ಟು ಬೆಳೆದ ಹೂವಿಗೆ ಸೂಕ್ತ ಬೆಲೆ ಸಿಗದೆ ರೈತರು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಬಳ್ಳಾಪುರ ಹೂ ಮಾರುಕಟ್ಟೆಯಲ್ಲಿ ಸೇವಂತಿ ಹಾಗೂ ಚೆಂಡು ಹೂವಿಗೆ ಬೇಡಿಕೆ ಕುಸಿದಿದ್ದು, ಕೆ.ಜಿ.ಗೆ ಕೇವಲ ₹2, ₹5ರಿಂದ ₹10ರ ವರೆಗೆ ಬೆಲೆ ಸಿಗುತ್ತಿದೆ. ಹೂವು ಕೀಳಲು ಮಾಡಿದ ಕೂಲಿ ಖರ್ಚನ್ನೂ ಭರಿಸಲಾಗದ ಸ್ಥಿತಿ ಎದುರಾಗಿದೆ. ಇದರಿಂದ ಆಕ್ರೋಶಗೊಂಡ ರೈತರು ತಾವು ಮಾರುಕಟ್ಟೆಗೆ ತಂದಿದ್ದ ಹೂವನ್ನು ಅಲ್ಲಿಯೇ ಚೆಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇನ್ನು ಗುಲಾಬಿ ಹೂವಿನ ಬೆಲೆಯೂ ಕೆ.ಜಿ.ಗೆ ₹50ಕ್ಕಿಂತ ಕಡಿಮೆಯಾಗಿದೆ.
ಬೆಲೆ ಕುಸಿತದ ತೀವ್ರತೆ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಗ್ರಾಮದ ರೈತ ಗಂಗಾಧರ್ ಅವರ ಘಟನೆ ಸಾಕ್ಷಿಯಾಗಿದೆ. ಸುಮಾರು 1.5 ಎಕರೆ ಪ್ರದೇಶದಲ್ಲಿ ಸೇವಂತಿ ಹಾಗೂ ಚೆಂಡು ಹೂ ಬೆಳೆದಿದ್ದ ಅವರು, ಎಕರೆಗೆ ಬರೋಬ್ಬರಿ ₹50 ಸಾವಿರ ಖರ್ಚು ಮಾಡಿದ್ದರು. ಆದರೆ ಮಾರುಕಟ್ಟೆಯಲ್ಲಿ ಹೂವಿಗೆ ಕೆ.ಜಿ.ಗೆ ಕೇವಲ ₹10 ಬೆಲೆ ಸಿಗುತ್ತಿರುವುದರಿಂದ, ಕಟಾವು ಮಾಡುವ ಖರ್ಚೂ ಕೈಗೆಟುಕದಂತಾಗಿದೆ.
ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗುವುದರಿಂದ ಯಾವುದೇ ಲಾಭವಾಗುವುದಿಲ್ಲ, ಬದಲಾಗಿ ಮತ್ತಷ್ಟು ನಷ್ಟವಾಗುತ್ತದೆ ಎಂದು ಮನನೊಂದ ರೈತ ಗಂಗಾಧರ್ ಅವರು ತಮ್ಮ 1.5 ಎಕರೆ ಹೂ ತೋಟಕ್ಕೆ ಟ್ರಾಕ್ಟರ್ ಹರಿಸಿ ಉಳುಮೆ ಮಾಡುವ ಮೂಲಕ ಬೆಳೆಯನ್ನು ನಾಶಪಡಿಸಿದ್ದಾರೆ. ಸಾಲ ಮಾಡಿ, ಬೆವರು ಸುರಿಸಿ ಬೆಳೆದ ಹೂವು ಕಣ್ಣೆದುರೇ ನಾಶವಾಗುತ್ತಿರುವ ದೃಶ್ಯ ಅನ್ನದಾತನ ಸಂಕಷ್ಟವನ್ನು ಬಿಂಬಿಸಿದೆ.
ಒಂದು ಕಡೆ ಬೆಳೆ ಬೆಳೆಯಲು ಮಾಡಿದ ಖರ್ಚು, ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ; ಈ ಎರಡರ ನಡುವೆ ಹೂ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ. ರೈತರ ಶ್ರಮಕ್ಕೆ ತಕ್ಕ ಬೆಲೆ ದೊರೆಯದಿದ್ದರೆ ಕೃಷಿಯೇ ಸಂಕಷ್ಟಕ್ಕೆ ಸಿಲುಕುವ ಅಪಾಯ ಎದುರಾಗಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಹೂ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ, ಸೂಕ್ತ ಬೆಂಬಲ ಬೆಲೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.
