
ಕುಂದಗೋಳ: ತಾಲೂಕಿನ ರೈತರು ಎದುರಿಸುತ್ತಿರುವ ಮೆಕ್ಕೆಜೋಳ ಹಾಗೂ ಕಡಲೆ ಖರೀದಿ ಕೇಂದ್ರದ ಸಮಸ್ಯೆ ಸೇರಿದಂತೆ ವಿವಿಧ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ರಾಜು ಮಾವರಕರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ತಾಲೂಕು ಅಧ್ಯಕ್ಷ ಗುರುಪಾದಪ್ಪ ಬಸಪ್ಪ ಬಂಕದ ಅವರ ನೇತೃತ್ವದಲ್ಲಿ ನಡೆದ ಈ ನಿಯೋಗವು, ರೈತರ ಜ್ವಲಂತ ಸಮಸ್ಯೆಗಳ ಕುರಿತು ತಹಶೀಲ್ದಾರ್ ಅವರ ಗಮನ ಸೆಳೆಯಿತು.
‘ನಮ್ಮ ಹೊಲ ನಮ್ಮ ದಾರಿ’ ಯೋಜನೆಗೆ ಆಗ್ರಹ:
ತಾಲೂಕಿನಾದ್ಯಂತ ರೈತರ ಜಮೀನುಗಳಿಗೆ ತೆರಳುವ ದಾರಿಗಳು ಸಂಪೂರ್ಣವಾಗಿ ಹದಗೆಟ್ಟಿವೆ. ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಜಾರಿಗೆ ತಂದಿರುವ “ನಮ್ಮ ಹೊಲ ನಮ್ಮ ದಾರಿ” ಯೋಜನೆಯಡಿ ತಾಲೂಕಿನ ಎಲ್ಲ ರೈತರ ಜಮೀನಿಗೆ ತೆರಳಲು ಸುಸಜ್ಜಿತ ದಾರಿಗಳನ್ನು ನಿರ್ಮಿಸಿಕೊಡಬೇಕು ಎಂದು ಮನವಿಯಲ್ಲಿ ವಿಶೇಷವಾಗಿ ಒತ್ತಾಯಿಸಲಾಯಿತು. ಸಂಶಿ ಗ್ರಾಮದ ವ್ಯಾಪ್ತಿಯ ಕವಲಿ ದಾರಿ, ನಿಂಗನಗೌಡ ದಾರಿ, ಹಳ್ಳಿ ದಾರಿ, ಚಾಕಲಬ್ಬಿ ರಸ್ತೆ ಸೇರಿದಂತೆ ಪ್ರಮುಖ ದಾರಿಗಳನ್ನು ಕೂಡಲೇ ಸುಧಾರಣೆ ಮಾಡಬೇಕು ಎಂದು ಆಗ್ರಹಿಸಿದರು.
ಖರೀದಿ ಕೇಂದ್ರಗಳ ಸ್ಥಾಪನೆಗೆ ಹಠ:
ತಾಲೂಕಿನಲ್ಲಿ ಮೆಕ್ಕೆಜೋಳದ ಸುಗ್ಗಿ ಮುಗಿಯುತ್ತಿದ್ದರೂ ಈವರೆಗೆ ಸರ್ಕಾರಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲ. ಇದರಿಂದ ರೈತರು ಅನಿವಾರ್ಯವಾಗಿ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ಬೆಳೆ ಮಾರಾಟ ಮಾಡುವಂತಾಗಿದೆ. ಆದ್ದರಿಂದ ತಕ್ಷಣವೇ ಮೆಕ್ಕೆಜೋಳ ಹಾಗೂ ಕಡಲೆ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ರಸ್ತೆ ಸುಧಾರಣೆ ಹಾಗೂ ಎಪಿಎಂಸಿ ಸ್ವಚ್ಛತೆಗೆ ಆಗ್ರಹ:
ಸಂಶಿ ಮತ್ತು ಅತ್ತಿಗೇರಿ ರಸ್ತೆಯು ಅತ್ಯಂತ ಕಳಪೆಯಾಗಿದ್ದು, ಕೂಡಲೇ ದುರಸ್ತಿ ಕಾರ್ಯ ಆರಂಭಿಸಬೇಕು. ಅಲ್ಲದೆ, ಸಂಶಿಯ ಎಪಿಎಂಸಿ ಪ್ರಾಂಗಣವನ್ನು ಸ್ವಚ್ಛಗೊಳಿಸಿ ರೈತರು ತಮ್ಮ ಬೆಳೆಗಳನ್ನು ಒಕ್ಕಲು ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ರೈತ ಕುಟುಂಬಕ್ಕೆ ಪರಿಹಾರ:
ತರ್ಲಘಟ್ಟ ಗ್ರಾಮದ ರೈತ ಮಹಬೂಬಸಾಬ ಗಣಿಸಾಬ ಸುಂಕದ ಅವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬದ ಸಂಕಷ್ಟವನ್ನು ಪರಿಗಣಿಸಿ ಸರ್ಕಾರದಿಂದ 25 ಲಕ್ಷ ರೂ. ಪರಿಹಾರ ಧನವನ್ನು ಶೀಘ್ರವಾಗಿ ವಿತರಿಸಬೇಕು ಎಂದು ಸಂಘಟನೆಯು ಒತ್ತಾಯಿಸಿತು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಂಕರಗೌಡ ದೊಡ್ಡಮನಿ, ಕರ್ನಾಟಕ ರಾಜ್ಯ ರೈತ ಸಂಘ (ವಾಸುದೇವ ಮೇಟಿ ಬಣ) ರಾಜ್ಯ ಉಪಾಧ್ಯಕ್ಷ ವೆಂಕನಗೌಡ ಕಂಠೇಪ್ಪಗೌಡ್ರ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚಂದ್ರು ಕುರುಬರ, ರೈತ ಸಂಘದ ಮಹಿಳಾ ಜಿಲ್ಲಾಧ್ಯಕ್ಷೆ ಶಂಕ್ರಮ್ಮ ಸುತಾರ, ಸಣ್ಣಮಾನಪ್ಪ ಕಮ್ಮಾರ, ದೇವಪ್ಪ ಇಚ್ಚಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

