ಜಿಟಿಟಿಸಿಯಲ್ಲಿ 2026-27ನೇ ಸಾಲಿನ ಕೌಶಲ್ಯ ಆಧಾರಿತ ಡಿಪ್ಲೊಮಾ ತರಗತಿಗಳಿಗೆ ಚಾಲನೆ: ಜಿಲ್ಲಾಧಿಕಾರಿ ಸ್ನೇಹಲ್ ಆರ್.

Spread the love

ಧಾರವಾಡ, ಜೂ.11: ಧಾರವಾಡದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ 2026-27ನೇ ಸಾಲಿನ ಕೌಶಲ್ಯ ಆಧಾರಿತ ಡಿಪ್ಲೊಮಾ ತರಗತಿಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ವಿಶ್ವದ ಅತಿ ಹೆಚ್ಚು ಯುವಜನಸಂಖ್ಯೆ ಹೊಂದಿರುವ ದೇಶವಾಗಿದ್ದು, ಯುವಕರು ಕೌಶಲ್ಯ ಆಧಾರಿತ ತರಬೇತಿ ಹಾಗೂ ಡಿಪ್ಲೊಮಾ ಶಿಕ್ಷಣ ಪಡೆಯುವುದರಿಂದ ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನಕ್ಕೆ ಮಾತ್ರ ಸೀಮಿತವಾಗದೇ ಹೊಸ ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇಂತಹ ಆಧುನಿಕ ತಾಂತ್ರಿಕ ಕೌಶಲ್ಯಗಳನ್ನು ಕಲಿಸುವಲ್ಲಿ ಜಿಟಿಟಿಸಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ತಿಳಿಸಿದರು.

ಜಿಟಿಟಿಸಿಗೆ ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ 50 ವರ್ಷಗಳ ಅನುಭವವಿದ್ದು, ದೇಶ-ವಿದೇಶಗಳ ಪ್ರಮುಖ ಕೈಗಾರಿಕೆಗಳಿಗೆ ಪರಿಣತ ಮಾನವ ಸಂಪನ್ಮೂಲವನ್ನು ಒದಗಿಸುತ್ತಿದೆ. ಇಲ್ಲಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ವಿದೇಶಗಳಲ್ಲಿ ಉದ್ಯೋಗ ಪಡೆಯುವುದರ ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿಯೂ ಸ್ವಂತ ಕೈಗಾರಿಕೆಗಳನ್ನು ಆರಂಭಿಸಿ ಹಲವರಿಗೆ ಉದ್ಯೋಗ ನೀಡುತ್ತಿರುವುದು ಸಂಸ್ಥೆಯ ಸಾಧನೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಕೌಶಲ್ಯಯುತ ಯುವಕರಿಗೆ ಹೆಚ್ಚಿನ ಬೇಡಿಕೆ ಬರಲಿದ್ದು, ತಾಂತ್ರಿಕ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ವೇಗವಾಗಿ ಆಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸ್ಕಿಲ್, ರಿ-ಸ್ಕಿಲ್, ಅಪ್-ಸ್ಕಿಲ್ ಮತ್ತು ಮಲ್ಟಿ-ಸ್ಕಿಲ್ ತರಬೇತಿಗಳಿಗೆ ಹೆಚ್ಚಿನ ಮಹತ್ವ ಸಿಗಲಿದೆ. ಈ ಎಲ್ಲ ತರಬೇತಿಗಳು ಜಿಟಿಟಿಸಿಯಲ್ಲಿ ಲಭ್ಯವಿದ್ದು, ಯುವಜನತೆ ಅವುಗಳ ಸದುಪಯೋಗ ಪಡೆದು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸೆಪ್ಟೆಂಬರ್ 2026ರಲ್ಲಿ ಚೀನಾದ ಶಾಂಘೈನಲ್ಲಿ ನಡೆಯಲಿರುವ ಜಾಗತಿಕ ಕೌಶಲ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಜಿಟಿಟಿಸಿ ಧಾರವಾಡ ಕೇಂದ್ರದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸಾಧನೆಗಾಗಿ ವಿದ್ಯಾರ್ಥಿಗಳು ಹಾಗೂ ತರಬೇತುದಾರರನ್ನು ಜಿಲ್ಲಾಧಿಕಾರಿ ಅಭಿನಂದಿಸಿದರು.

ಪ್ರತಿ ವರ್ಷ ಧಾರವಾಡ ಕೇಂದ್ರದಿಂದ ವಿದ್ಯಾರ್ಥಿಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕೌಶಲ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಿಲ್ಲೆ ಮತ್ತು ದೇಶಕ್ಕೆ ಕೀರ್ತಿ ತರುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಇಂತಹ ಕೌಶಲ್ಯ ತರಬೇತಿ ಸಂಸ್ಥೆಗಳಿಗೆ ಸೇರಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಕರೆ ನೀಡಿದರು.

ಜಿಟಿಟಿಸಿ ಧಾರವಾಡ ಕೇಂದ್ರದ ವಿದ್ಯಾರ್ಥಿಗಳಾದ ಸಿದ್ದಾರೂಡ ಕನಿಹಾಳ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಹಾಗೂ ಚರಣ ಅವರು ಸಿಎನ್‌ಸಿ ಮಿಲ್ಲಿಂಗ್ ತಂತ್ರಜ್ಞಾನ ವಿಭಾಗದಲ್ಲಿ ರಾಜ್ಯ, ದಕ್ಷಿಣ ಭಾರತ ಮತ್ತು ಅಖಿಲ ಭಾರತ ಮಟ್ಟದ ಕೌಶಲ್ಯ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದು ಇದೀಗ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಧಾರವಾಡ ಜಿಲ್ಲೆ ಹಾಗೂ ಕರ್ನಾಟಕಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟ್ ತರಬೇತುದಾರ ಹಾಗೂ ಮೈಂಡ್ ವೇವ್ ಸಂಸ್ಥೆಯ ಮುಖ್ಯಸ್ಥ ಮಹೇಶ್ ಮಾಶಾಳ ಅವರು ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಉದ್ದೇಶಿಸಿ ಪ್ರೇರಣಾದಾಯಕ ಮಾತುಗಳನ್ನಾಡಿದರು. ಬದಲಾಗುತ್ತಿರುವ ತಾಂತ್ರಿಕ ಜಗತ್ತಿನಲ್ಲಿ ಕಲಿಕೆ, ವ್ಯಕ್ತಿತ್ವ ವಿಕಸನ ಹಾಗೂ ನಿರಂತರ ಪ್ರಯತ್ನಗಳ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಶಿವಾನಂದ ಕುಂಬಾರ ವಹಿಸಿದ್ದರು. ಕೇಂದ್ರದ ಎಚ್‌ಒಡಿ ಬಸವರಾಜ ಬಿ. ಅವರು ವಿವಿಧ ತರಬೇತಿ ಕೋರ್ಸ್‌ಗಳ ಕುರಿತು ಮಾಹಿತಿ ನೀಡಿದರು. ರಾಷ್ಟ್ರೀಯ ಮಟ್ಟದಲ್ಲಿ ಕೌಶಲ್ಯ ತರಬೇತಿಗೆ ಮನ್ನಣೆ ಪಡೆದಿರುವ ಶಂಕರ ಗೌಡ ಅವರು ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗಳಿಗೆ ಹೇಗೆ ಸಜ್ಜುಗೊಳಿಸಲಾಗುತ್ತದೆ ಎಂಬುದನ್ನು ವಿವರಿಸಿದರು.

ಪ್ರಶಾಂತ ಸುತಾರ ಕಾರ್ಯಕ್ರಮ ನಿರೂಪಿಸಿದರು. ಜಿಟಿಟಿಸಿಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *