
ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದ ಹುಬ್ಬಳ್ಳಿ–ಲಕ್ಷ್ಮೇಶ್ವರ ರಸ್ತೆಯ ಮಾರ್ಗ ಮಧ್ಯದಲ್ಲಿರುವ ಗುಡಗೇರಿ ಕ್ರಾಸ್ ಬಳಿ ಬೈಕ್ ಮತ್ತು ಟ್ಯಾಂಕರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ರಾತ್ರಿ ನಡೆದಿದೆ.
ಗುಡಗೇರಿ ಗ್ರಾಮದ ಆನಂದ ಬಸವರಾಜ ಮುಂಡರಗಿ ಅವರು ಬೈಕ್‌ನಲ್ಲಿ ಡೀಸೆಲ್ ತರಲು ಸಂಶಿ ಗ್ರಾಮಕ್ಕೆ ತೆರಳಿದ್ದ ವೇಳೆ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಪರಿಣಾಮ ಅವರ ತಲೆ ಹಾಗೂ ಬಾಯಿಗೆ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವದ ಸ್ಥಿತಿಯಲ್ಲಿ ಅವರು ರಸ್ತೆ ಬದಿಯಲ್ಲೇ ನರಳಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆ ಕಂಡ ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಕ್ಷಣವೇ ಅಂಬುಲೆನ್ಸ್‌ಗೆ ಕರೆ ಮಾಡಿದರೂ, ವಾಹನವು ಸಮಯಕ್ಕೆ ಸರಿಯಾಗಿ ಆಗಮಿಸದೇ ಸುಮಾರು 45 ನಿಮಿಷಗಳಿಂದ ಒಂದು ಗಂಟೆಯವರೆಗೆ ವಿಳಂಬವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ತುರ್ತು ಚಿಕಿತ್ಸೆಯ ಅವಶ್ಯಕತೆ ಇದ್ದರೂ ಅಂಬುಲೆನ್ಸ್ ತಡವಾಗಿ ಬಂದ ಹಿನ್ನೆಲೆ ಗಾಯಾಳು ಸ್ಥಳದಲ್ಲೇ ನರಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಅಂಬುಲೆನ್ಸ್ ವಿಳಂಬವಾಗುತ್ತಿರುವ ವಿಷಯ ತಿಳಿದು ಸ್ಥಳೀಯರು ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ನಂತರ ಅಂಬುಲೆನ್ಸ್ ಸ್ಥಳಕ್ಕೆ ಆಗಮಿಸಿದೆ. ಗಾಯಾಳುವನ್ನು ಮೊದಲು ಕುಂದಗೋಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಚಿಕ್ಕಪ್ಪನ ಮಗನಾದ ನಾಗರಾಜ ಆವರು ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಇತ್ತೀಚೆಗೆ ಇದೇ ಅಂಬುಲೆನ್ಸ್ ಸಮಸ್ಯೆಯನ್ನು ಖಂಡಿಸಿ ಗುಡಗೇರಿ ಗ್ರಾಮದಲ್ಲಿ ಪ್ರತಿಭಟನೆ ನಡೆದಿತ್ತು. ಆಗ ನಡೆದ ಘಟನೆಯಲ್ಲಿ ಬಾಲಕನೊಬ್ಬ ಮೃತಪಟ್ಟ ಹಿನ್ನೆಲೆ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಆ ಘಟನೆ ಮಸುಕಾಗುವ ಮುನ್ನವೇ ಮತ್ತೆ ಅಂಬುಲೆನ್ಸ್ ವಿಳಂಬದ ಪ್ರಕರಣ ಬೆಳಕಿಗೆ ಬಂದಿರುವುದು ತಾಲೂಕು ಆರೋಗ್ಯ ವ್ಯವಸ್ಥೆಯ ಮೇಲಿನ ಪ್ರಶ್ನೆಗಳನ್ನು ಮತ್ತೊಮ್ಮೆ ಎಬ್ಬಿಸಿದೆ.
ತಾಲ್ಲೂಕು ಆಸ್ಪತ್ರೆಗೆ ಸಮರ್ಪಕ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾದರೂ ಎಚ್ಚೆತ್ತುಕೊಳ್ಳುವರೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

