ಧಾರವಾಡ:ಆತ್ಮ ಯೋಜನೆಯಡಿ ನೇರಗುತ್ತಿಗೆ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ಜುಲೈ 20 ಕೊನೆಯ ದಿನ

Spread the love

ಧಾರವಾಡ, ಜು.7: 2026-27ನೇ ಸಾಲಿನ ಆತ್ಮ (ATMA) ಯೋಜನೆಯಡಿ ಧಾರವಾಡ ಜಿಲ್ಲೆಯ ಕೃಷಿ ಇಲಾಖೆಯ ವಿವಿಧ ಕಚೇರಿಗಳಲ್ಲಿ ಖಾಲಿ ಇರುವ ಸಹಾಯಕ ತಾಂತ್ರಿಕ ವ್ಯವಸ್ಥಾಪಕ (ATM) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಂಟಿ ಕೃಷಿ ನಿರ್ದೇಶಕರ ಕಚೇರಿ, ಧಾರವಾಡದ ಅಧೀನದಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳಾದ ಧಾರವಾಡ, ಹುಬ್ಬಳ್ಳಿ, ಕಲಘಟಗಿ ಹಾಗೂ ಧಾರವಾಡ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಒಟ್ಟು ನಾಲ್ಕು (4) ಸಹಾಯಕ ತಾಂತ್ರಿಕ ವ್ಯವಸ್ಥಾಪಕ (ATM) ಹುದ್ದೆಗಳನ್ನು ನೇರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.25,000 ಗೌರವಧನ ನೀಡಲಾಗುತ್ತದೆ.

ಅರ್ಜಿದಾರರು ಕೃಷಿ ಅಥವಾ ಕೃಷಿ ಸಂಬಂಧಿತ ವಿಜ್ಞಾನಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಕೃಷಿ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು.

ಅಭ್ಯರ್ಥಿಗಳ ಆಯ್ಕೆಯನ್ನು ಜಿಲ್ಲಾ ಮಟ್ಟದ ನೇಮಕಾತಿ ಸಮಿತಿ ನಡೆಸಲಿದೆ. ಅರ್ಜಿ ನಮೂನೆ (ಅನುಬಂಧ–1A)ಯನ್ನು ಜಂಟಿ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆದುಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ಜನ್ಮ ದಿನಾಂಕದ ದಾಖಲೆ, ಜಾತಿ ಪ್ರಮಾಣ ಪತ್ರ (ಅನ್ವಯಿಸಿದಲ್ಲಿ), ವಿದ್ಯಾರ್ಹತೆ, ಕೆಲಸದ ಅನುಭವ, ಹಿಂದಿನ ಹುದ್ದೆಯ ಅಂತಿಮ ವೇತನ ಪ್ರಮಾಣ ಪತ್ರ, ನಡತೆ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲಾತಿಗಳ ದೃಢೀಕೃತ ಪ್ರತಿಗಳನ್ನು ಸಲ್ಲಿಸಬೇಕು.

ಅರ್ಜಿಗಳನ್ನು ಜುಲೈ 20, 2026ರೊಳಗಾಗಿ ಧಾರವಾಡ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಆತ್ಮ ವಿಭಾಗವನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *