
ನವಲಗುಂದ: ನಗರದ ದೇಸಾಯಿ ಪೇಟೆ ಓಣಿಯ ನಿವಾಸಿಗಳ ಬಹುದಿನದ ಬೇಡಿಕೆಯಾಗಿದ್ದ ಶ್ರೀ ಗಂಗೆಬಸವೇಶ್ವರ ನೂತನ ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಅವರು ಮಂಗಳವಾರ ದೀಪಾವಳಿ ಪಾಡ್ಯದ ಶುಭ ಸಂದರ್ಭದಲ್ಲಿ ಭೂಮಿಪೂಜೆ ನೆರವೇರಿಸಿದರು.
ಓಣಿಯ ಗುರುಹಿರಿಯರು ಹಾಗೂ ಗಣ್ಯರ ಸಾನ್ನಿಧ್ಯದಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಕೋನರಡ್ಡಿ, ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ದೇವಸ್ಥಾನ ನಿರ್ಮಾಣಕ್ಕೆ ಚಾಲನೆ ನೀಡಿರುವುದು ನನ್ನ ಸೌಭಾಗ್ಯವಾಗಿದೆ ಎಂದರು. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ದೇವಸ್ಥಾನ ನಿರ್ಮಾಣಕ್ಕೆ ₹30 ಲಕ್ಷ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ಸದಾ ಸಹಕಾರ ನೀಡುವುದಾಗಿ ತಿಳಿಸಿದ ಅವರು, ವೈಯಕ್ತಿಕವಾಗಿ ₹50 ಸಾವಿರ ದೇಣಿಗೆ ನೀಡಿದರು.
ಕಾಂಗ್ರೆಸ್ ಪಕ್ಷವು ಸರ್ವಧರ್ಮಗಳ ಸಮಾನತೆ ಹಾಗೂ ಸಮನ್ವಯತೆಯೊಂದಿಗೆ ಎಲ್ಲ ಜನಾಂಗ ಮತ್ತು ಧರ್ಮಗಳ ಅಭಿವೃದ್ಧಿಗೆ ಬದ್ಧವಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಜೊತೆಗೆ ಎಲ್ಲ ಧರ್ಮಗಳ ಆರಾಧನಾ ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ದೇಸಾಯಿ ಪೇಟೆ ಓಣಿಯ ಜನರ ಬಹುದಿನದ ಬೇಡಿಕೆಯಾಗಿರುವ ಗಂಗೆಬಸವೇಶ್ವರ ದೇವಸ್ಥಾನಕ್ಕೆ ಅನುದಾನ ಬಳಸಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗುವುದು. ಈ ದೇವಸ್ಥಾನ ಈ ಭಾಗದ ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಶಾಸಕರು, ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬಂದು ರೈತರ ಬದುಕು ಹಸನಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಬಳಿಕ ಬೆಳಗ್ಗೆಯಿಂದಲೇ ಯುವಕರು ರಥಕ್ಕೆ ಬಣ್ಣ, ಹೂವಿನ ಮಾಲೆ ಹಾಗೂ ತಳಿರು ತೋರಣಗಳಿಂದ ಸುಂದರವಾಗಿ ಅಲಂಕರಿಸಿ, ಗಂಗೆಬಸವೇಶ್ವರ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಅಲಂಕೃತ ರಥೋತ್ಸವಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಅವರು ಚಾಲನೆ ನೀಡಿದರು.
ರಥೋತ್ಸವವು ಗಾಂಧಿ ಮಾರ್ಕೆಟ್ ಮೂಲಕ ಗಣಪತಿ ದೇವಸ್ಥಾನ ತಲುಪಿತು. ಅಲ್ಲಿ ವಿಶೇಷ ಪೂಜೆ ನೆರವೇರಿಸಿದ ಬಳಿಕ ಪುನಃ ಗಂಗೆಬಸವೇಶ್ವರ ದೇವಸ್ಥಾನದವರೆಗೆ ಭಕ್ತರು ಜಯಘೋಷಗಳೊಂದಿಗೆ ರಥವನ್ನು ಎಳೆದರು. ಭಕ್ತರು ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಹಾಗೂ ಹೂವುಗಳನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ದೇವಸ್ಥಾನದಲ್ಲಿ ಮಹಾಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಪಿಎಸ್ಐ ಚಂದ್ರಶೇಖರ ಸಾಗನೂರ, ರೈತ ಮುಖಂಡ ಲೋಕನಾಥ ಹೆಬಸೂರ, ಬಸವರಾಜ ಹರಿವಾಳ, ಮಲ್ಲಯ್ಯ ಗೌರಿಮಠ, ನಾಗಪ್ಪ ಸಂಗಟಿ, ರಾಯನಗೌಡ ಪಾಟೀಲ, ನಿಂಗಪ್ಪ ಹರಿವಾಳ, ಮಂಜುನಾಥ ಸುಬೇದಾರ, ಶಿವಪುತ್ರಪ್ಪ ಖಂಡಿಬಾಗಿಲ, ಪ್ರಕಾಶ ಶಿಗ್ಲಿ, ಉಸ್ಮಾನ್ ಬಬರ್ಚಿ, ಆನಂದ ಹವಳಕೋಡ, ಶಂಭು ಕೆರಿಮಠ, ಪರಪ್ಪ ಖಂಡಿಬಾಗಿಲ, ನಾಗಪ್ಪ ಯಳಮಲಿ, ಗಂಗಪ್ಪ ಸಂಗಟಿ, ನೀಲಯ್ಯ ಡೋಣರೂಮಠ, ಯಲ್ಲಪ್ಪ ಕೊಟಗಿ, ಮಹೇಶ ಕುರ್ತಕೋಟಿ, ಸಿದ್ದು ಗೌರಿಮಠ, ಉಮೇಶ ಹಂಚಿನಾಳ ಸೇರಿದಂತೆ ಓಣಿಯ ಯುವಕರು ಹಾಗೂ ಗುರುಹಿರಿಯರು ಉಪಸ್ಥಿತರಿದ್ದರು.
