
ಬೈಲಹೊಂಗಲ: ತಾಲ್ಲೂಕಿನ ಮರಕುಂಬಿ ಗ್ರಾಮದ ಸಮೀಪವಿರುವ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಆಕಸ್ಮಿಕ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಖಾನೆಯ ಎವಿಸಿಪಿ ನಂ-1ರ ಕಂಪಾರ್ಟ್‌ಮೆಂಟ್ ವಾಲ್ ದುರಸ್ತಿ ಕಾರ್ಯದ ವೇಳೆ ಏಕಾಏಕಿ ಕುದಿಯುವ ಬಿಸಿ ಪದಾರ್ಥ ಸೋರಿಕೆಯಾದ ಪರಿಣಾಮ ಈ ಸಾವು-ನೋವು ಸಂಭವಿಸಿದೆ.
ಸುಮಾರು 40 ಅಡಿ ಎತ್ತರದಲ್ಲಿರುವ ವಾಲ್ ದುರಸ್ತಿ ಕಾರ್ಯಕ್ಕಾಗಿ ಎವಿಸಿಪಿ ನಂ-1ನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕಾರ್ಮಿಕರು ವಾಲ್‌ನ ನಟ್ ಬೋಲ್ಟ್‌ಗಳನ್ನು ತೆಗೆಯುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಕುದಿಯುವ ಬಿಸಿ ದ್ರವ ಕಾರ್ಮಿಕರ ಮೈಮೇಲೆ ಬಿದ್ದಿದೆ. ಬಿಸಿ ಪದಾರ್ಥ ಮೈಮೇಲೆ ಬೀಳುತ್ತಿದ್ದಂತೆ ಕಾರ್ಮಿಕರು ತೀವ್ರವಾಗಿ ಸುಟ್ಟ ಗಾಯಗಳಿಂದ ಕಿರುಚಾಡತೊಡಗಿದರು. ತಕ್ಷಣವೇ ಅಲ್ಲಿದ್ದ ಸಹೋದ್ಯೋಗಿಗಳು ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಚಿಕಿತ್ಸೆ ಫಲಿಸದೆ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

ಮೃತರನ್ನು ಜಮಖಂಡಿಯ ಅಕ್ಷಯ್ ಚೋಪಡೆ (45), ನೇಸರಗಿಯ ದೀಪಕ ಮುನವಳ್ಳಿ (31) ಮತ್ತು ಖಾನಾಪೂರ ತಾಲ್ಲೂಕಿನ ಸುದರ್ಶನ ಬನೋಶಿ (25) ಎಂದು ಗುರುತಿಸಲಾಗಿದೆ. ಉಳಿದಂತೆ ಭರತ್ ಬಸಪ್ಪ ಸಾರವಾಡಿ, ರಾಘವೇಂದ್ರ ಗಿರಿಯಾಳ, ಮಂಜು ತೇರದಾಳ, ಮಂಜು ಕಾಜಗಾರ ಹಾಗೂ ಗುರು ತಮ್ಮಣ್ಣವರ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಮುರಗೋಡ ಪೊಲೀಸ್ ಠಾಣೆಯ ಪಿಐ ಐ.ಎಮ್. ಮಠಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಭದ್ರವಾಗಿ ಬಂದ್ ಮಾಡಲಾಗಿದ್ದ ವಾಲ್‌ನಿಂದ ಬಿಸಿ ಪದಾರ್ಥ ಏಕಾಏಕಿ ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಈ ಪ್ರಕರಣವು ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

