ಸಂಚಾರಿ ನಿಯಮ ಉಲ್ಲಂಘನೆ ದಂಡದಲ್ಲಿ ಶೇ. 50 ರಿಯಾಯಿತಿ ಸೌಲಭ್ಯ ಬಳಸಿಕೊಳ್ಳಿ: ಅಪರ ಸಾರಿಗೆ ಆಯುಕ್ತ ಕೆ. ಟಿ. ಹಾಲಸ್ವಾಮಿ

Spread the love

. 12 ರವರೆಗೆ ಅವಕಾಶ; ಬಾಕಿ ಇರುವ ಪ್ರಕರಣ ಇತ್ಯರ್ಥಕ್ಕೆ ಸಾರ್ವಜನಿಕರಿಗೆ ಮನವಿ

ಧಾರವಾಡ: ನವೆಂಬರ್ 26: ವಿವಿಧ ರೀತಿಯ ಸಂಚಾರ ವಾಹನಗಳ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಿಧಿಸಿದ ದಂಡದ ಮೊತ್ತದಲ್ಲಿ ರಾಜ್ಯ ಸರ್ಕಾರವು ಶೇಕಡಾ 50 ರಷ್ಟು ರಿಯಾಯಿತಿ ನೀಡಿ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರು, ವಿಶೇಷವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವವರು ಈ ಅವಕಾಶವನ್ನು ಬಳಸಿಕೊಂಡು ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ಗಳಲ್ಲಿನ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಅಪರ ಸಾರಿಗೆ ಆಯುಕ್ತ ಕೆ. ಟಿ. ಹಾಲಸ್ವಾಮಿ ಅವರು ಹೇಳಿದರು.

​ಅವರು ಬುಧವಾರದಂದು (ನ.26) ನವನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಸಾರಿಗೆ ಇಲಾಖೆಯ ವಿವಿಧ ವಿಷಯಗಳ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಮಾಹಿತಿಯನ್ನು ನೀಡಿದರು.

​ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಿನಾಂಕ 11/02/2023 ರ ಒಳಗಾಗಿ ದಾಖಲಾಗಿರುವ ಪ್ರಕರಣಗಳಿಗೆ ಮತ್ತು ಸಾರಿಗೆ ಇಲಾಖೆಯಲ್ಲಿ 1991 ರಿಂದ 2020 ರವರೆಗೆ ದಾಖಲಾದ ಪ್ರಕರಣಗಳಿಗೆ ಶೇಕಡಾ 50 ರಷ್ಟು ವಿನಾಯಿತಿಯನ್ನು ನೀಡಿದೆ. ಸಂಬಂಧಪಟ್ಟ ವಾಹನದ ಮಾಲೀಕರು ನವೆಂಬರ್ 21, 2025 ರಿಂದ ಡಿಸೆಂಬರ್ 12, 2025 ರವರೆಗೆ ದಂಡವನ್ನು ಭರಣ ಮಾಡಿ ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

​ಹುಬ್ಬಳ್ಳಿ-ಧಾರವಾಡದಲ್ಲಿ ಒಟ್ಟು 3,051, ಬೆಳಗಾವಿ ವಿಭಾಗದಲ್ಲಿ 11,557 ಮತ್ತು ಗುಲ್ಬರ್ಗ ವಿಭಾಗದಲ್ಲಿ 7,473 ಪ್ರಕರಣಗಳು ಈ ರಿಯಾಯಿತಿ ವ್ಯಾಪ್ತಿಯಲ್ಲಿ ಇವೆ ಎಂದು ಅವರು ತಿಳಿಸಿದರು.

ಶಾಲಾ ವಾಹನ ನಿಯಮ ಉಲ್ಲಂಘನೆ ಹಾಗೂ ಟ್ರ್ಯಾಕ್ಟರ್‌ಗಳಿಗೆ ಸೂಚನೆ:

​ಇದೇ ವೇಳೆ, ಹುಬ್ಬಳ್ಳಿ-ಧಾರವಾಡದಲ್ಲಿ ಪಾಂಡಿಚೇರಿ ನೋಂದಣಿ ಹೊಂದಿದ್ದ 12 ರಿಂದ 15 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಅವುಗಳಿಂದ ಒಟ್ಟು 1.50 ಕೋಟಿ ರೂಪಾಯಿಗಳ ದಂಡದ ಹಣ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

​ಶಾಲಾ ವಾಹನಗಳಲ್ಲಿ ನಿಯಮಾನುಸಾರಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ ಹಾಲಸ್ವಾಮಿ ಅವರು, ಜನವರಿ 2025 ರಿಂದ ಅಕ್ಟೋಬರ್ 2025 ರ ಅಂತ್ಯದವರೆಗೆ 3,902 ಪ್ರಕರಣಗಳು ದಾಖಲಾಗಿವೆ. ಆದ್ದರಿಂದ, ಶಾಲಾ ವಾಹನಗಳನ್ನು ಕಾನೂನುಬಾಹಿರವಾಗಿ ಓಡಿಸಬಾರದು, ಸರ್ಕಾರದ ನಿಯಮಾನುಸಾರವೇ ಓಡಿಸಬೇಕು ಎಂದು ತಾಕೀತು ಮಾಡಿದರು.

​ಕಬ್ಬಿನ ಗಾಡಿಗಳನ್ನು ಎಳೆಯುವ ಟ್ರ್ಯಾಕ್ಟರ್‌ಗಳ ಟ್ರೇಲರ್‌ಗಳಿಗೆ ಹಿಂಬದಿಯಲ್ಲಿ ರಿಫ್ಲೆಕ್ಷನ್‌ಗಳು ಇರುವುದಿಲ್ಲ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಹಾಗಾಗಿ, ಟ್ರ್ಯಾಕ್ಟರ್‌ಗಳ ಹಿಂಬದಿಯಲ್ಲಿ ಎಲ್ಲರೂ ರಿಫ್ಲೆಕ್ಷನ್ ಅಳವಡಿಸಬೇಕು. ಇದರಿಂದ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಟ್ರೇಲರ್ ಗಾಡಿಗಳಿಗೆ ರಿಫ್ಲೆಕ್ಷನ್ ಅಳವಡಿಸುವುದಕ್ಕಾಗಿ ರಿಫ್ಲೆಕ್ಷನ್ ಬಟ್ಟೆ ಬ್ಯಾನರ್ ಅನ್ನು ಅವರು ಬಿಡುಗಡೆ ಮಾಡಿದರು.

​ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಮೋಟರ್ ವಾಹನ ನಿರೀಕ್ಷಕ ಮಠಪತಿ, ಪ್ರಥಮ ದರ್ಜೆ ಸಹಾಯಕ ದಿನಮನಿ ಟಿ.ವಿ. ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *