
ಕುಂದಗೋಳ: ಜಿಲ್ಲಾಧಿಕಾರಿಗಳೇ ಖುದ್ದಾಗಿ ಸಮಯ ನಿಗದಿಪಡಿಸಿ, ಸಾರ್ವಜನಿಕರ ಅಹವಾಲು ಆಲಿಸುವ ಸಭೆಗೆ ಗೈರುಹಾಜರಾದ ಘಟನೆ ಕುಂದಗೋಳದಲ್ಲಿ ಇಂದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಧಾರವಾಡ ಜಿಲ್ಲಾಧಿಕಾರಿಗಳಾದ ಸ್ನೇಹಲ್ ಆರ್. ಅವರು ಇಂದು ಬೆಳಿಗ್ಗೆ 11:00 ಗಂಟೆಗೆ ಸಾರ್ವಜನಿಕ ಸಂಪರ್ಕ ಅಹವಾಲು ಸಭೆಯನ್ನು ನಿಗದಿಪಡಿಸಿದ್ದರು. ತಮ್ಮ ಸಮಸ್ಯೆಗಳನ್ನು ಹೊತ್ತು ದೂರದೂರುಗಳಿಂದ ಆಗಮಿಸಿದ್ದ ನೂರಾರು ರೈತರು ಹಾಗೂ ಸಾರ್ವಜನಿಕರು ನಿಗದಿತ ಸಮಯಕ್ಕೆ ತಹಶೀಲ್ದಾರ್ ಕಚೇರಿಗೆ ಹಾಜರಾಗಿದ್ದರು.
ಆದರೆ, ಸಮಯ ಮೀರಿ ಗಂಟೆ ಕಳೆದರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸದಿದ್ದರಿಂದ ಕಾದು ಕಾದು ಸುಸ್ತಾದ ಸಾರ್ವಜನಿಕರು ಹಾಗೂ ರೈತ ಸಂಘಟನೆಗಳ ಪದಾಧಿಕಾರಿಗಳು ಆಡಳಿತ ಯಂತ್ರದ ಬೇಜವಾಬ್ದಾರಿತನಕ್ಕೆ ಕಿಡಿಕಾರಿದರು. ಜಿಲ್ಲಾಧಿಕಾರಿಗಳ ಈ ನಡವಳಿಕೆಯನ್ನು ರೈತ ವಿರೋಧಿ ಧೋರಣೆ ಎಂದು ಖಂಡಿಸಿದ ಪ್ರತಿಭಟನಾಕಾರರು, ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಭಾರತ ರೈತ ಸಮಾಜ ಸಂಘಟನೆ, ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು ಒಗ್ಗೂಡಿ, “ಅಯ್ಯಯ್ಯೋ ಅನ್ಯಾಯ”, “ಅಹವಾಲು ಸ್ವೀಕರಿಸದ ಜಿಲ್ಲಾಧಿಕಾರಿಗಳಿಗೆ ಧಿಕ್ಕಾರ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳೇ ಸಮಯ ನೀಡಿ ಜನರನ್ನು ಕಾಯಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಧಿಕಾರಿಗಳು, ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ರೈತರ ಮನವಿಯನ್ನು ಸ್ವೀಕರಿಸಿದರು. ಆಡಳಿತದ ವಿಳಂಬ ಧೋರಣೆಯಿಂದಾಗಿ ಸಾರ್ವಜನಿಕರು ಬಿಸಿಲಿನಲ್ಲಿ ಗಂಟೆಗಟ್ಟಲೆ ಪರದಾಡುವಂತಾದ ಘಟನೆ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಸಾಕ್ಷಿಯಾಯಿತು.

