ಧಾರವಾಡದಲ್ಲಿ ಆಟೋ ಗ್ಯಾಸ್ ಅಭಾವ: ಕಿಲೋಮೀಟರ್‌ಗಟ್ಟಲೆ ಕ್ಯೂ ನಿಂತ ಚಾಲಕರು; ಬಂಕ್‌ಗಳ ಮುಂದೆ ಆಹಾಕಾರ!

Spread the love

ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಆಟೋ ಎಲ್‌ಪಿಜಿ ಗ್ಯಾಸ್‌ಗೆ ತೀವ್ರ ಅಭಾವ ಸೃಷ್ಟಿಯಾಗಿದ್ದು, ಆಟೋ ರಿಕ್ಷಾ ಚಾಲಕರು ಗ್ಯಾಸ್‌ಗಾಗಿ ಹಗಲು-ರಾತ್ರಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ಬಹುತೇಕ ಆಟೋ ಗ್ಯಾಸ್ ಬಂಕ್‌ಗಳು ಗ್ಯಾಸ್ ಪೂರೈಕೆಯಿಲ್ಲದೆ ಸಂಪೂರ್ಣವಾಗಿ ಬಂದ್ ಆಗಿರುವುದು ಚಾಲಕರ ಆತಂಕಕ್ಕೆ ಕಾರಣವಾಗಿದೆ.

​ನಗರದಾದ್ಯಂತ ಗ್ಯಾಸ್ ಸಿಗದ ಕಾರಣ ಚಾಲಕರು ರಾಯಾಪುರದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ನತ್ತ ಮುಗಿಬಿದ್ದಿದ್ದಾರೆ. ಇಲ್ಲಿ ಮಾತ್ರ ಸದ್ಯಕ್ಕೆ ಗ್ಯಾಸ್ ಲಭ್ಯವಿದ್ದು, ಇಂಧನ ತುಂಬಿಸಿಕೊಳ್ಳಲು ಬೆಳಿಗ್ಗೆಯಿಂದಲೇ ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲಿನಲ್ಲಿ ಆಟೋಗಳು ನಿಂತಿವೆ. ಒಂದು ಕೆಜಿ ಎಲ್‌ಪಿಜಿ ಗ್ಯಾಸ್‌ಗೆ 94 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಈ ದುಬಾರಿ ಬೆಲೆಯು ಚಾಲಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಷ್ಟೊಂದು ಹಣ ತೆತ್ತರೂ ಗ್ಯಾಸ್ ಸಿಗುವುದು ಖಚಿತವಿಲ್ಲದಂತಾಗಿದ್ದು, ರಾಯಾಪುರದ ಬಂಕ್‌ನಲ್ಲೂ ದಾಸ್ತಾನು ಮುಗಿಯುವ ಹಂತಕ್ಕೆ ಬಂದಿದೆ. ಕೇವಲ 40 ಆಟೋಗಳಿಗೆ ಆಗುವಷ್ಟು ಮಾತ್ರ ಗ್ಯಾಸ್ ಬಾಕಿ ಉಳಿದಿರುವುದರಿಂದ ಚಾಲಕರಲ್ಲಿ ತಳಮಳ ಉಂಟಾಗಿದೆ.

​ದಿನವಿಡೀ ಸಾಲಿನಲ್ಲಿ ನಿಲ್ಲುವುದರಿಂದ ಬಾಡಿಗೆ ಇಲ್ಲದೆ ಆದಾಯಕ್ಕೆ ಕುತ್ತು ಬಂದಿದೆ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ತಕ್ಷಣವೇ ಮಧ್ಯಪ್ರವೇಶಿಸಿ ಗ್ಯಾಸ್ ಪೂರೈಕೆಯನ್ನು ಸುಗಮಗೊಳಿಸಬೇಕು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಆಟೋ ಚಾಲಕರು ತೀವ್ರವಾಗಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *