ಜಗತ್ತಿನಲ್ಲಿ ಶಾಂತಿ ನೆಲೆಸಲಿ: ಜಾತ್ರೆಯ ತೇರಿಗೆ ‘ಯುದ್ಧ ನಿಲ್ಲಲಿ’ ಎಂಬ ಸಂದೇಶದ ಬಾಳೆಹಣ್ಣು ಎಸೆದ ಯುವಕ

Spread the love

ಧಾರವಾಡ: ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧ ಸಂಘರ್ಷದಿಂದ ಜಗತ್ತಿನಾದ್ಯಂತ ಅಶಾಂತಿ ಮೂಡಿರುವ ಬೆನ್ನಲ್ಲೇ, ಧಾರವಾಡದ ಯುವಕನೊಬ್ಬ ಜಾಗತಿಕ ಶಾಂತಿಗಾಗಿ ದೇವರಿಗೆ ವಿಶಿಷ್ಟವಾಗಿ ಮೊರೆ ಹೋಗುವ ಮೂಲಕ ಗಮನ ಸೆಳೆದಿದ್ದಾನೆ.

​ತಾಲೂಕಿನ ನರೇಂದ್ರ ಗ್ರಾಮದಲ್ಲಿ ಗುರುವಾರ ಸಂಭ್ರಮದಿಂದ ಜರುಗಿದ ಶ್ರೀ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಈ ಅಪರೂಪದ ಘಟನೆ ಸಂಭವಿಸಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯಾದ ರಥೋತ್ಸವದ ವೇಳೆ ಭಕ್ತರು ಹಣ್ಣು-ಜವನ ಎಸೆಯುವುದು ವಾಡಿಕೆ. ಆದರೆ, ಈ ಯುವಕ ಮಾತ್ರ ಬಾಳೆಹಣ್ಣಿನ ಮೇಲೆ ‘ಯುದ್ಧ ನಿಲ್ಲಲಿ… ಶಾಂತಿ ನೆಲೆಸಲಿ’ ಎಂಬ ಅರ್ಥಪೂರ್ಣ ಸಂದೇಶವನ್ನು ಬರೆದು ಅದನ್ನು ಭಕ್ತಿಯಿಂದ ತೇರಿಗೆ ಎಸೆದಿದ್ದಾನೆ.

​ಯುದ್ಧದ ವ್ಯತಿರಿಕ್ತ ಪರಿಣಾಮಗಳು ಕೇವಲ ಆಯಾ ದೇಶಗಳಿಗಷ್ಟೇ ಸೀಮಿತವಾಗದೆ ಇಡೀ ಜಗತ್ತಿನ ಮೇಲೆ ಬೀರಲಿವೆ. ಹೀಗಾಗಿ ವಿಶ್ವದಾದ್ಯಂತ ಶಾಂತಿ ನೆಲೆಸಬೇಕು, ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎನ್ನುವುದು ಈ ಯುವಕನ ಆಶಯವಾಗಿತ್ತು. ತನ್ನ ಗ್ರಾಮದ ಆರಾಧ್ಯ ದೈವದ ಮುಂದೆ ಈ ರೀತಿ ಶಾಂತಿಯ ಬಿನ್ನಹ ಇಟ್ಟಿರುವ ಯುವಕನ ಫೋಟೋ ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ. ಯುವಕನ ಈ ವಿಶಿಷ್ಟ ಕಾಳಜಿ ಮತ್ತು ಮಾನವೀಯ ನಡೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

Leave a Reply

Your email address will not be published. Required fields are marked *