ಪ್ರಾಮಾಣಿಕತೆ ಮೆರೆದ ಸಾರಿಗೆ ನಿರ್ವಾಹಕಿ: ಮಹಿಳೆಗೆ ಮರಳಿ ಸಿಕ್ಕ ಮೊಬೈಲ್

Spread the love

ರಾಣೇಬೆನ್ನೂರ: ಬಸ್ಸಿನಲ್ಲಿ ಆಕಸ್ಮಿಕವಾಗಿ ಬಿಟ್ಟು ಹೋಗಿದ್ದ ಮೊಬೈಲ್ ಫೋನನ್ನು ಮಹಿಳೆಯೊಬ್ಬರಿಗೆ ಮರಳಿಸುವ ಮೂಲಕ ಕೆಎಸ್ಆರ್‌ಟಿಸಿ ಬಸ್ ನಿರ್ವಾಹಕಿಯೊಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ತಾಲೂಕಿನ ಗುಡಿಹೊನ್ನತ್ತಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

​ತಾಲೂಕಿನ ಮೈದೂರು ಗ್ರಾಮದ ಕೆಂಚವ್ವ ಹರಿಜನ ಎಂಬ ಮಹಿಳೆಯು ಬೆಳಿಗ್ಗೆ ರಾಣೇಬೆನ್ನೂರಿನಿಂದ ಚಂದಾಪುರಕ್ಕೆ ಹೊರಡುವ ಬಸ್ಸಿನಲ್ಲಿ ಹೊನ್ನತ್ತಿಗೆ ತೆರಳಲು ಹತ್ತಿದ್ದರು. ಹೊನ್ನತ್ತಿಯಲ್ಲಿ ಬಸ್ ಇಳಿಯುವ ಸಂದರ್ಭದಲ್ಲಿ ಅವರು ಅರಿಯದೇ ತಮ್ಮ ಮೊಬೈಲ್ ಫೋನನ್ನು ಸೀಟಿನಲ್ಲಿಯೇ ಬಿಟ್ಟು ದೇವಸ್ಥಾನಕ್ಕೆ ಹೋಗಿದ್ದರು. ಈ ವೇಳೆ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕಿ ವನಜಾಕ್ಷಿ ಬಿ.ಜೆ. ಅವರಿಗೆ ಮೊಬೈಲ್ ಸಿಕ್ಕಿದ್ದು, ವಾರಸುದಾರರು ಪತ್ತೆಯಾಗದಿದ್ದರೆ ಪೊಲೀಸರಿಗೆ ಒಪ್ಪಿಸುವ ಉದ್ದೇಶದಿಂದ ಅದನ್ನು ಭದ್ರವಾಗಿ ತಮ್ಮ ಬಳಿ ಇರಿಸಿಕೊಂಡಿದ್ದರು.

​ನಂತರ ಅದೇ ಬಸ್ ಚಂದಾಪುರದಿಂದ ರಾಣೇಬೆನ್ನೂರಿಗೆ ವಾಪಸ್ ಬರುತ್ತಿದ್ದಾಗ, ಕೆಂಚವ್ವ ಅವರು ಮರಳಿ ತಮ್ಮೂರಿಗೆ ಹೋಗಲು ಪುನಃ ಅದೇ ಬಸ್ ಹತ್ತಿದ್ದಾರೆ. ಬಸ್ ಹೊನ್ನತ್ತಿ ಬಿಟ್ಟು ಸ್ವಲ್ಪ ದೂರ ಸಾಗಿದಾಗ ಅವರಿಗೆ ಮೊಬೈಲ್ ಇಲ್ಲದಿರುವುದು ನೆನಪಾಗಿದೆ. ದೇವಸ್ಥಾನದಲ್ಲಿಯೇ ಫೋನ್ ಮರೆತು ಬಂದಿರಬಹುದೆಂದು ಗಾಬರಿಗೊಂಡ ಅವರು, ಬಸ್ ನಿಲ್ಲಿಸುವಂತೆ ನಿರ್ವಾಹಕಿ ವನಜಾಕ್ಷಿ ಅವರಲ್ಲಿ ವಿನಂತಿಸಿದ್ದಾರೆ.

​ವಿಷಯ ತಿಳಿದ ನಿರ್ವಾಹಕಿಯು ತಕ್ಷಣ ಮಹಿಳೆಯಿಂದ ಮೊಬೈಲ್‌ನ ಗುರುತು ಮತ್ತು ಸಂಖ್ಯೆಯ ವಿವರಗಳನ್ನು ಪಡೆದುಕೊಂಡು ಖಚಿತಪಡಿಸಿಕೊಂಡ ನಂತರ, ತಾವು ಜತನವಾಗಿ ಎತ್ತಿಟ್ಟಿದ್ದ ಮೊಬೈಲ್ ಫೋನನ್ನು ಅವರಿಗೆ ಹಸ್ತಾಂತರಿಸಿದರು. ಕಳೆದುಹೋದ ವಸ್ತುವನ್ನು ಸುರಕ್ಷಿತವಾಗಿ ಮರಳಿಸಿದ ನಿರ್ವಾಹಕಿ ವನಜಾಕ್ಷಿ ಅವರ ಪ್ರಾಮಾಣಿಕ ಕಾರ್ಯವನ್ನು ಕಂಡು ಬಸ್ಸಿನಲ್ಲಿದ್ದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಮರಳಿ ಪಡೆದ ಮಹಿಳೆ ಹಾಗೂ ಸಾರ್ವಜನಿಕರು ನಿರ್ವಾಹಕಿಯ ಕರ್ತವ್ಯ ನಿಷ್ಠೆಗೆ ಪ್ರಶಂಸೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *