​ಕುಂದಗೋಳ ತಹಶೀಲ್ದಾರ್ ವಾಹನಕ್ಕೆ ಇಲ್ಲ ನಂಬರ್ ಪ್ಲೇಟ್:

Spread the love

ಕುಂದಗೋಳ: ಸಾರ್ವಜನಿಕರು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸಣ್ಣ ತಪ್ಪು ಮಾಡಿದರೂ ದಂಡ ವಿಧಿಸುವ ಅಧಿಕಾರಿಗಳು, ತಾವೇ ನಿಯಮ ಉಲ್ಲಂಘಿಸಿದರೆ ಕೇಳುವವರು ಯಾರು? ಕುಂದಗೋಳ ಪಟ್ಟಣದ ತಹಶೀಲ್ದಾರರಿಗೆ ಸರ್ಕಾರದಿಂದ ಹೊಸ ವಾಹನ ಮಂಜೂರಾಗಿ ಎರಡು-ಮೂರು ತಿಂಗಳು ಕಳೆದಿದ್ದರೂ, ಈವರೆಗೂ ಅದಕ್ಕೆ ಅಧಿಕೃತ ನೋಂದಣಿ ಸಂಖ್ಯೆ (Registration Number) ಸಿಕ್ಕಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಆರ್.ಟಿ.ಓ ಅನುಮತಿ ಇಲ್ಲದೆ ಸಂಚಾರ:

ಯಾವುದೇ ಹೊಸ ವಾಹನ ಶೋರೂಮ್‌ನಿಂದ ಹೊರಬಂದ ಮೇಲೆ ತಾತ್ಕಾಲಿಕ ನೋಂದಣಿ ಸಂಖ್ಯೆಯೊಂದಿಗೆ ಸಂಚರಿಸಲು ಕೇವಲ ಒಂದು ತಿಂಗಳ ಕಾಲಾವಕಾಶವಿರುತ್ತದೆ. ಆದರೆ ಕುಂದಗೋಳ ತಹಶೀಲ್ದಾರರ ಈ ಹೊಸ ವಾಹನವು ಯಾವುದೇ ಆರ್.ಟಿ.ಓ ಅನುಮತಿ ಅಥವಾ ಅಧಿಕೃತ ನಂಬರ್ ಇಲ್ಲದೆ ನಿರಂತರವಾಗಿ ರಸ್ತೆಗಿಳಿಯುತ್ತಿದೆ. ಆಶ್ಚರ್ಯದ ಸಂಗತಿಯೆಂದರೆ, ನಂಬರ್ ಪ್ಲೇಟ್ ಇರಬೇಕಾದ ಜಾಗದಲ್ಲಿ “ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಗಳು” ಎಂಬ ಬೋರ್ಡ್ ಹಾಕಿಕೊಂಡು ರಾಜಾರೋಷವಾಗಿ ಸಂಚರಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಅಪಘಾತವಾದರೆ ಹೊಣೆ ಯಾರು?

ಒಂದು ವೇಳೆ ಈ ವಾಹನದಿಂದ ಯಾವುದಾದರೂ ಅವಗಡ ಸಂಭವಿಸಿದರೆ ಅದರ ಸಂಪೂರ್ಣ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆ ಈಗ ಮೂಡಿದೆ. ಅಧಿಕೃತ ನೋಂದಣಿ ಇಲ್ಲದ ವಾಹನಗಳಿಗೆ ವಿಮೆ (Insurance) ಸೌಲಭ್ಯ ದೊರೆಯುವುದು ಅಸಾಧ್ಯ. ಇಂತಹ ಸಂದರ್ಭದಲ್ಲಿ ಜೀವಹಾನಿಯೋ ಅಥವಾ ಆಸ್ತಿಪಾಸ್ತಿ ಹಾನಿಯೋ ಸಂಭವಿಸಿದರೆ ಸಾರ್ವಜನಿಕರಿಗೆ ಪರಿಹಾರ ನೀಡುವವರು ಯಾರು? ಕಾನೂನು ಪಾಲಿಸಬೇಕಾದ ದಂಡಾಧಿಕಾರಿಗಳೇ ಈ ರೀತಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಚರ್ಚೆ ತಾಲೂಕಿನಲ್ಲಿ ಜೋರಾಗಿದೆ.

ಜಿಲ್ಲಾಧಿಕಾರಿಗಳ ಗಮನಕ್ಕೆ:

ಕೇವಲ ಬೋರ್ಡ್ ಹಾಕಿಕೊಂಡ ತಕ್ಷಣ ಕಾನೂನಿನಿಂದ ವಿನಾಯಿತಿ ಸಿಗುವುದಿಲ್ಲ. ಕೂಡಲೇ ಸಂಬಂಧಪಟ್ಟ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಕಿದೆ. ನಿಯಮಬಾಹಿರವಾಗಿ ಸಂಚರಿಸುತ್ತಿರುವ ಈ ವಾಹನಕ್ಕೆ ಕೂಡಲೇ ನೋಂದಣಿ ಮಾಡಿಸಿ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಮಾದರಿಯಾಗಬೇಕಿದೆ ಎಂದು ತಾಲೂಕಿನ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *