
ಕುಂದಗೋಳ: ತಾಲ್ಲೂಕಿನ ಜಿಗಳೂರು ಕ್ರಾಸ್ ಬಳಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲೇ ರೈತರು ತಮ್ಮ ಎತ್ತು, ಚಕ್ಕಡಿ, ಟ್ರ್ಯಾಕ್ಟರ್ ಹಾಗೂ ನೀರಿನ ಟ್ಯಾಂಕರ್‌ಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ. ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರೈತರು ಹೆದ್ದಾರಿಯಲ್ಲೇ ಅಡುಗೆ ಪಾತ್ರೆಗಳನ್ನಿಟ್ಟು ಅಡುಗೆ ಮಾಡುವ ಮೂಲಕ ತಮ್ಮ ಹೋರಾಟದ ತೀವ್ರತೆಯನ್ನು ಪ್ರದರ್ಶಿಸುತ್ತಿದ್ದಾರೆ.
ಶಿಗ್ಗಾಂವ ತಾಲ್ಲೂಕಿನ ಹೊಸೂರಿನಿಂದ ಉದ್ಭವವಾಗುವ ಹಳ್ಳದಿಂದ ಕುಂದಗೋಳ ಹಾಗೂ ನವಲಗುಂದ ತಾಲ್ಲೂಕಿನ ಅಕ್ಕಪಕ್ಕದ ಸಾವಿರಾರು ಎಕರೆ ಜಮೀನುಗಳು ಮಳೆಯಾದಾಗ ಜಲಾವೃತಗೊಂಡು ಸಂಪೂರ್ಣ ಹಾಳಾಗುತ್ತಿವೆ. ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದ್ದು, ಕೇವಲ ಅಲ್ಪ ಪ್ರಮಾಣದ ಅನುದಾನ ನೀಡಿ ಕೈತೊಳೆದುಕೊಂಡಿದೆ ಎಂದು ರೈತರು ಆರೋಪಿಸಿದ್ದಾರೆ. ನೀಡಲಾದ ಅನುದಾನವೂ ಕೇವಲ ನವಲಗುಂದ ತಾಲ್ಲೂಕಿಗೆ ಸೀಮಿತವಾಗಿದ್ದು, ಕುಂದಗೋಳ ತಾಲ್ಲೂಕಿನ ರೈತರಿಗೆ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಈ ಭಾಗದ ರೈತರ ಹಿತದೃಷ್ಟಿಯಿಂದ ಕೂಡಲೇ ಹೆಚ್ಚುವರಿ 300 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ರತ್ನ ಭಾರತ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹೆಮನಗೌಡ ಬಸನಗೌಡ್ರ ಅವರು, ಬೆಣ್ಣೆ ಹಳ್ಳದಿಂದ ಅಕ್ಕಪಕ್ಕದ ರೈತರಿಗೆ ನೀರು ನುಗ್ಗಿ ಸಮಸ್ಯೆ ಉಂಟಾಗುತ್ತಿದೆ. ಹಳ್ಳದ ಬಳಿ ತಡಗೋಡೆ ನಿರ್ಮಾಣ ಮಾಡಬೇಕು. ರೈತರು ತಮ್ಮ ಜಮೀನಿಗೆ ತೆರಳಲು ಸಹ ಈ ಹಳ್ಳದಿಂದ ಅಡಚಣೆ ಉಂಟಾಗಿ ಸುತ್ತು ವರೆದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದನ್ನೂ ಸರಿಪಡಿಸಬೇಕು. ಈಗ ನೀಡಿರುವ 200 ಕೋಟಿ ಅನುದಾನ ಸಾಕಾಗುವುದಿಲ್ಲ, ಇನ್ನೂ 300 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಸರ್ಕಾರ ಕಣ್ಣೊರೆಸುವ ತಂತ್ರ ಬಿಟ್ಟು ಕೂಡಲೇ ಆರಂಭವಾಗುವ ಸದನದಲ್ಲಿ ಈ ಬಗ್ಗೆ ಚರ್ಚಿಸಿ ಅನುದಾನ ಘೋಷಿಸಬೇಕು. ಅನುದಾನ ಬಿಡುಗಡೆಯ ಅಧಿಕೃತ ಆದೇಶ ಬರುವವರೆಗೂ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೃಷಿ ಭೂಮಿ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಜನಪ್ರತಿನಿಧಿಗಳು ಮೌನ ವಹಿಸಿರುವುದು ದುರದೃಷ್ಟಕರ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿ ಹಲವಾರು ರೈತರು ಬೀಡುಬಿಟ್ಟಿದ್ದು ವಿಶೇಷವಾಗಿತ್ತು.
ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ರಾಜು ಮಾವರಕರ ಅವರು ರೈತರ ಮನವಿಗೆ ಸ್ಪಂದಿಸಿದ ನಂತರ ರೈತರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು. ಇದೇ ಸಂದರ್ಭದಲ್ಲಿ ರೈತರು ತಹಶೀಲ್ದಾರರ ಮೂಲಕ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಸಲ್ಲಿಸಿದರು. ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಹೋರಾಟದಲ್ಲಿ ರಾಜ್ಯ ವಿದ್ಯಾಸಿರಿಯ ಷಡಕ್ಷರಯ್ಯ ಸ್ವಾಮಿಜಿ ಸಾನಿದ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ರೈತ ಮುಂಖಡರಾದ ಶ್ರೀಕಂಠಗೌಡ್ರ ಹಿರೇಗೌಡ್ರ, ದೇವೆಂದ್ರಪ್ಪ ಇಚ್ಚಂಗಿ, ರಾಜು ಮಲ್ಲಿಗವಾಡ, ವಿರೂಪಾಕ್ಷಿ ಕಳ್ಳಿಮನಿ, ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತ ಮುಖಂಡರು ಅನೇಕ ರೈತ ಮಹಿಳೆಯರು ಭಾಗವಹಿಸಿದ್ದರು.

