ಕುಂದಗೋಳ: ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಅಪ್ರತಿಮ ಸಾಧನೆ ಮಾಡುತ್ತಿದ್ದು, ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎಂದು ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಕರೆ ನೀಡಿದರು.
ಪಟ್ಟಣದ ಮರಾಠಾ ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಹಾಗೂ ವಿವಿಧ ವೃಂದಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ’ ಹಾಗೂ ‘ಮಹಿಳಾ ಸಬಲೀಕರಣ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಇಂದು ಕೇವಲ ಮನೆಗೆ ಸೀಮಿತವಾಗದೆ ಭಾರತೀಯ ಸೇನೆ, ಪೊಲೀಸ್ ಇಲಾಖೆ, ಕಂದಾಯ, ಪೈಲೆಟ್ ಹಾಗೂ ರಾಜಕೀಯ ಸೇರಿದಂತೆ ಸವಾಲಿನ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಹಿಳೆಯರು ಯಾವುದೇ ಅಂಜಿಕೆ ಇಲ್ಲದೆ ಧೈರ್ಯದಿಂದ ತಮ್ಮ ಗುರಿಯತ್ತ ಸಾಗಬೇಕು ಎಂದು ಅವರು ಇದೇ ವೇಳೆ ಮಹಿಳೆಯರಿಗೆ ಸ್ಫೂರ್ತಿ ತುಂಬಿದರು.
ಇದೇ ಸಂದರ್ಭದಲ್ಲಿ ಆರೋಗ್ಯ, ಶಿಕ್ಷಣ, ಅಕ್ಷರ ದಾಸೋಹ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕಿಯರನ್ನು ಕುಸುಮಾವತಿ ಶಿವಳ್ಳಿಯವರ ನೇತೃತ್ವದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವಿ ಮಾಡಲಗೇರಿ ಅವರು ಮಹಿಳಾ ಸಬಲೀಕರಣದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷರಾದ ಶಾಂತಾ ಶಿವಣ್ಣನವರ, ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಿಕಾ ಪರಶುರಾಮ ಹಾಗೂ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು ಮತ್ತು ನೌಕರರು ಉಪಸ್ಥಿತರಿದ್ದರು.


