​ಗುಡಿಸಾಗರ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ವೈಭವ

Spread the love

ನವಲಗುಂದ: ತಾಲೂಕಿನ ಗುಡಿಸಾಗರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಸರಸ್ವತಿ ಪೂಜೆ, 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿದವು. ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ನಂತರ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿದಾನಂದ ಮುತ್ತಣ್ಣವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುರುಲಿಂಗಯ್ಯ ಹಿರೇಮಠ್ ಆಗಮಿಸಿದ್ದರು. ರಜಪೂತ ಶಿಕ್ಷಕಿಯರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಡಿಎಂಸಿ ಸದಸ್ಯ ಲಕ್ಷ್ಮಣ ಪೂಜಾರ ಅವರು, “ಮನೆಯಲ್ಲಿ ತಂದೆ-ತಾಯಿ ಹೇಗೋ ಶಾಲೆಯಲ್ಲಿ ಗುರುಗಳು ಹಾಗೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ, ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸಿ ಉತ್ತಮ ಶಿಕ್ಷಣ ಪಡೆಯಬೇಕು” ಎಂದು ಕಿವಿಮಾತು ಹೇಳಿದರು.

​ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಕಳೆದ 15 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಹಿಂದಿ ಶಿಕ್ಷಕಿ ರಜಪೂತ ಅವರಿಗೆ ಭಾವಪೂರ್ಣ ವಿದಾಯ ಹೇಳಲಾಯಿತು. ಈ ವೇಳೆ ಮಾತನಾಡಿದ ಫಕ್ಕೀರೇಶ ಪಡೆಸೂರ ಅವರು, ಶಿಕ್ಷಕಿಯ ವರ್ಗಾವಣೆಯಿಂದ ಶಾಲೆಯಲ್ಲಿ ಮೌನದ ವಾತಾವರಣ ಉಂಟಾಗಿದ್ದು, ವಿದ್ಯಾರ್ಥಿಗಳಲ್ಲಿ ನೋವು ತಂದಿದೆ. ಅವರ ಮುಂದಿನ ವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ಎಸ್‌ಡಿಎಂಸಿ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಶಿಕ್ಷಕಿಯ ಸೇವೆಯನ್ನು ಸ್ಮರಿಸಿ ಶುಭ ಕೋರಿದರು.

​ವೇದಿಕೆಯ ಮೇಲೆ ಎ.ಬಿ. ಕೊಪ್ಪದ, ಎಪಿಎಂಸಿ ಮಾಜಿ ಅಧ್ಯಕ್ಷ ಗುರುನಾಥ ಉಳ್ಳೆಗಡ್ಡಿ, ಬಾಬುಗೌಡ ಕುಲಕರ್ಣಿ, ಗಿರೀಶ ದೇವರಡ್ಡಿ, ಭೀಮಣ್ಣ ಪಟ್ಟೆದ, ಬಾಬುಗೌಡ ಕಲ್ಲಿ, ಮಂಜು ಕಣ್ಣೂರ ಹಾಗೂ ಶಾಲೆಯ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಎ.ಬಿ. ಕೊಪ್ಪದ ಸರ್ ವಂದಿಸಿದರು.

Leave a Reply

Your email address will not be published. Required fields are marked *