ಧಾರವಾಡದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಬ್ಯಾಂಕರ್ಸ್ ಪ್ರಗತಿ ಪರಿಶೀಲನಾ ಸಭೆ: ನಿಯಮ ಪಾಲನೆಗೆ ಸಿಇಒ ಭುವನೇಶ ಪಾಟೀಲ ಸೂಚನೆ

Spread the love

ಧಾರವಾಡ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲಾ ಬ್ಯಾಂಕ್‌ಗಳು ತಮ್ಮ ವ್ಯವಹಾರಗಳಲ್ಲಿ ಸರ್ಕಾರದ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಜನಸ್ನೇಹಿಯಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಸೂಚಿಸಿದರು. ಮಾ.10 ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ (ಡಿಎಲ್‌ಆರ್‌ಸಿ) ಹಾಗೂ ಜಿಲ್ಲಾ ಮಟ್ಟದ ಸಲಹಾ ಸಮಿತಿ (ಡಿಸಿಸಿ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಹಕರಿಗೆ, ಅದರಲ್ಲೂ ವಿಶೇಷವಾಗಿ ರೈತರಿಗೆ ಯಾವುದೇ ರೀತಿಯ ಅಸಹಕಾರ ಅಥವಾ ತೊಂದರೆ ಉಂಟಾದಲ್ಲಿ ಜಿಲ್ಲಾ ಸಮಿತಿಯು ಅದನ್ನು ಗಂಭೀರವಾಗಿ ಪರಿಗಣಿಸಿ ನಿಯಮಾನುಸಾರ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡುತ್ತದೆ ಎಂದು ಅವರು ಎಚ್ಚರಿಸಿದರು.

ಜಿಲ್ಲೆಯ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಜೊತೆಗೆ ಕೃಷಿ ವಲಯಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ರೈತರಿಗೆ ಸಕಾಲದಲ್ಲಿ ಸಾಲ ವಿತರಿಸಬೇಕು ಎಂದು ತಿಳಿಸಿದ ಸಿಇಒ ಅವರು, ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಆರ್‌ಬಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು. ವಸೂಲಾತಿಯಲ್ಲಿ ಏನಾದರೂ ತೊಂದರೆಗಳಿದ್ದರೆ ಅದನ್ನು ಸಮಿತಿ ಸಭೆಯಲ್ಲಿ ಚರ್ಚಿಸಬೇಕೇ ಹೊರತು, ಅನಗತ್ಯವಾಗಿ ನಿಯಮ ಮೀರಿ ರೈತರಿಗೆ ಅಥವಾ ಇತರ ಗ್ರಾಹಕರಿಗೆ ತೊಂದರೆ ನೀಡಬಾರದು ಎಂದು ಬ್ಯಾಂಕರ್‌ಗಳಿಗೆ ತಾಕೀತು ಮಾಡಿದರು. ಬ್ಯಾಂಕ್‌ಗಳ ಸೇವೆ ಅಥವಾ ಸಿಬ್ಬಂದಿಯ ಬಗ್ಗೆ ದೂರುಗಳಿದ್ದಲ್ಲಿ ಗ್ರಾಹಕರು ನೇರವಾಗಿ ದೂರು ಸಲ್ಲಿಸಲು ಅನುಕೂಲವಾಗುವಂತೆ ಆಯಾ ಬ್ಯಾಂಕ್ ಶಾಖೆಗಳು ಸರಿಯಾದ ಮಾಹಿತಿ ನೀಡಬೇಕು. ಒಂಬುಡ್ಸಮನ್ ಹಾಗೂ ಬ್ಯಾಂಕ್‌ಗಳ ದೂರು ಸಮಿತಿಗಳ ಬಗ್ಗೆ ಬಿತ್ತಿ ಪತ್ರ ಹಾಗೂ ಪೋಸ್ಟರ್‌ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

ಜಿಲ್ಲೆಯ ಸಾಲ ಗುರಿ ಸಾಧನೆಯ ಕುರಿತು ಮಾತನಾಡಿದ ಭುವನೇಶ ಪಾಟೀಲ ಅವರು, ಡಿಸೆಂಬರ್ 2025ರ ಅಂತ್ಯದವರೆಗೆ ಜಿಲ್ಲೆಯ ಒಟ್ಟು ಆದ್ಯತೆ ಕ್ಷೇತ್ರ ಸಾಲದ ಗುರಿ ಸಾಧನೆಯಾಗಿದ್ದರೂ, ಕುಂದಗೋಳ ತಾಲ್ಲೂಕಿನಲ್ಲಿ ಹಿನ್ನಡೆಯಾಗಿರುವುದನ್ನು ಗಮನಕ್ಕೆ ತಂದರು. ಕುಂದಗೋಳ ತಾಲ್ಲೂಕಿಗೆ ನೀಡಲಾದ 432.24 ಕೋಟಿ ರೂ. ಗುರಿಯ ಪೈಕಿ ಕೇವಲ 416.23 ಕೋಟಿ ರೂ. ಮಾತ್ರ ಸಾಲ ವಿತರಣೆಯಾಗಿದೆ. ಆದ್ದರಿಂದ ಈ ತಾಲ್ಲೂಕಿನ ಬ್ಯಾಂಕುಗಳು ವಿಶೇಷ ಗಮನಹರಿಸಿ ಮಾರ್ಚ್ ಅಂತ್ಯದೊಳಗೆ ನಿಗದಿತ ಗುರಿ ತಲುಪಬೇಕು ಎಂದು ಸೂಚಿಸಿದರು. ಇದೇ ವೇಳೆ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳ ಅಡಿಯಲ್ಲಿ ಬಾಕಿ ಇರುವ ಅರ್ಜಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ದೇವರಾಜ ಅರಸು ನಿಗಮದ 13, ಅಂಬೇಡ್ಕರ್ ನಿಗಮದ 16, ಬೋವಿ ನಿಗಮದ 7, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ 55 ಹಾಗೂ ಪಿಎಂ ವಿಶ್ವಕರ್ಮ ಯೋಜನೆಯ 408 ಅರ್ಜಿಗಳು ತಕ್ಷಣ ಮಂಜೂರಾಗಬೇಕು ಎಂದರು. ಪಿಎಂ ಸ್ವನಿಧಿ ಯೋಜನೆಯ ಬಾಕಿ ಅರ್ಜಿಗಳನ್ನು ಕೂಡಲೇ ವಿತರಿಸಿ, ಎಲ್ಲಾ ಯೋಜನೆಗಳ ವಿಲೇವಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಭಾರತೀಯ ರಿಸರ್ವ್ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕ ಅರುಣಕುಮಾರ್ ಅವರು ಮಾತನಾಡಿ, ಆರ್‌ಬಿಐ ಒಂಬುಡ್ಸಮನ್ ದೂರು ಪರಿಹಾರ ಪ್ರಕ್ರಿಯೆಯ ಬಗ್ಗೆ ವಿವರಣೆ ನೀಡಿದರು. ಬ್ಯಾಂಕಿಂಗ್ ಸೇವೆಗಳಲ್ಲಿ ತೊಂದರೆಯಾದಲ್ಲಿ ಗ್ರಾಹಕರು ಮೊದಲು ಸಂಬಂಧಿಸಿದ ಶಾಖೆ ಅಥವಾ ಗ್ರಾಹಕ ಸೇವಾ ಕೇಂದ್ರಕ್ಕೆ ಲಿಖಿತವಾಗಿ ಅಥವಾ ಆನ್‌ಲೈನ್ ಮೂಲಕ ದೂರು ನೀಡಬೇಕು. ಅಲ್ಲಿ 30 ದಿನಗಳೊಳಗೆ ತೃಪ್ತಿಕರ ಉತ್ತರ ಸಿಗದಿದ್ದರೆ, ಗ್ರಾಹಕರು ಆರ್‌ಬಿಐ ಕಂಪ್ಲೇಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (CMS) ಅಡಿಯಲ್ಲಿ https://cms.rbi.org.in ವೆಬ್‌ಸೈಟ್ ಮೂಲಕ ನೇರವಾಗಿ ಒಂಬುಡ್ಸಮನ್‌ಗೆ ದೂರು ಸಲ್ಲಿಸಬಹುದು. ಈ ವ್ಯವಸ್ಥೆಯ ಮೂಲಕ ಆರ್‌ಬಿಐ ಬ್ಯಾಂಕುಗಳಿಂದ ವಿವರ ಪಡೆದು ಸೂಕ್ತ ಪರಿಹಾರ ಕ್ರಮ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಾದ ಬಡವರಾಜ ಗಡದವರ ಅವರು ಮಾಹಿತಿ ನೀಡಿ, ಧಾರವಾಡ ಜಿಲ್ಲೆಯಲ್ಲಿ ಆದ್ಯತೆ ಕ್ಷೇತ್ರ (Priority Sector) ಅಡಿಯಲ್ಲಿ ಬ್ಯಾಂಕುಗಳು ಒಟ್ಟು 11,587.68 ಕೋಟಿ ರೂ. ಸಾಲ ಮಂಜೂರು ಮಾಡಿವೆ ಎಂದು ತಿಳಿಸಿದರು. ಸಭೆಯಲ್ಲಿ ಬ್ಯಾಂಕ್ ಆಫ್ ಬರೋಡಾದ ಉಪ ಪ್ರಾದೇಶಿಕ ವ್ಯವಸ್ಥಾಪಕ ಅಮರೀಶ್ ಗೌಡ ಸೇರಿದಂತೆ ಜಿಲ್ಲೆಯ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. ಲೀಡ್ ಬ್ಯಾಂಕ್ ಮ್ಯಾನೇಜರ್ ಬಡವರಾಜ ಗಡದವರ ಅವರು ಎಲ್ಲರನ್ನೂ ಸ್ವಾಗತಿಸಿ ಸಭೆಯನ್ನು ನಿರ್ವಹಿಸಿದರು.

Leave a Reply

Your email address will not be published. Required fields are marked *