ಮಿತ ಸಮಯದಲ್ಲಿ ಓದುವ ಕಥೆಗಳು ಇಂದಿನ ಅಗತ್ಯ: ಡಾ. ಶ್ರೀಧರ ಹೆಗಡೆ ಭದ್ರನ್ ಅಭಿಪ್ರಾಯ

Spread the love

ಧಾರವಾಡ: ಇಂದಿನ ಯಾಂತ್ರಿಕ ಜೀವನದಲ್ಲಿ ದೀರ್ಘವಾದ ಕಥೆಗಳನ್ನು ಓದುವ ವ್ಯವಧಾನ ಯಾರಿಗೂ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಮಿತ ಸಮಯದಲ್ಲಿ ಹೇಳುವ ಮತ್ತು ಓದುವ ಕಥೆಗಳೇ ಹೆಚ್ಚು ಜನಪ್ರಿಯವಾಗುತ್ತಿವೆ ಎಂದು ಉಪನ್ಯಾಸಕ ಡಾ. ಶ್ರೀಧರ ಹೆಗಡೆ ಭದ್ರನ್ ತಿಳಿಸಿದರು.

​ನಗರದ ಕ.ವಿ.ವಿ. ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಡಾ. ಬಸವರಾಜ ಸಾದರ ಅವರು ಸಂಪಾದಿಸಿದ ‘ಮಿತಸಮಯ’ ಮಹಿಳಾ ಕಥಾ ಸಂಚಯ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಈ ಕಥಾ ಸಂಕಲನದಲ್ಲಿ ಹತ್ತು ಜನ ಕಥೆಗಾರ್ತಿಯರು ವಿಭಿನ್ನ ಶೈಲಿ ಹಾಗೂ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಾಮಾಜಿಕ ಸನ್ನಿವೇಶಗಳನ್ನು ಸೆರೆಹಿಡಿದಿದ್ದಾರೆ. ಈ ಕಥೆಗಳ ಭಾಷೆ, ನಿರೂಪಣೆ ಮತ್ತು ತಂತ್ರಗಾರಿಕೆ ಮನೋಜ್ಞವಾಗಿದ್ದು, ಸಮಕಾಲೀನ ಸಂದರ್ಭಕ್ಕೆ ಕೈಗನ್ನಡಿಯಾಗಿವೆ. ಕಥೆಗಾರರೇ ತಮ್ಮ ಕಥೆಗಳನ್ನು ಓದುವುದು ಇಲ್ಲಿನ ವಿಶೇಷತೆಯಾಗಿದ್ದು, ಡಾ. ಸಾದರ ಅವರ ಈ ಹೊಸ ಪ್ರಯತ್ನಕ್ಕೆ ಕ.ವಿ.ವಿ. ಸಂಘದ ಪ್ರೋತ್ಸಾಹ ಶ್ಲಾಘನೀಯ ಎಂದರು.

​ಕೃತಿ ಲೋಕಾರ್ಪಣೆ ಮಾಡಿದ ಡಾ. ಶಾಂತಾ ಇಮ್ರಾಪೂರ ಮಾತನಾಡಿ, ಕನ್ನಡ ಕಥಾ ಸಾಹಿತ್ಯಕ್ಕೆ 100 ವರ್ಷಗಳ ಇತಿಹಾಸವಿದೆ. 1950ರ ದಶಕದಲ್ಲಿ ಮಹಿಳೆಯರು ಕೌಟುಂಬಿಕ ಚೌಕಟ್ಟಿನ ಪಾಡುಗಳನ್ನೇ ಕಥೆಗಳಾಗಿಸುತ್ತಿದ್ದರು. ನಂತರ ಬಂದ ಕಥೆಗಳು ಪ್ರಗತಿಶೀಲ ಮತ್ತು ವೈಚಾರಿಕ ನೆಲೆಗಟ್ಟಿನಲ್ಲಿ ಹೊಸ ಪ್ರಪಂಚಕ್ಕೆ ತೆರೆದುಕೊಂಡಿವೆ. ವೀಣಾ ಶಾಂತೇಶ್ವರ ಅವರ ಕಥೆಗಳಲ್ಲಿ ಇಂತಹ ವೈಚಾರಿಕತೆಯನ್ನು ಕಾಣಬಹುದು. ಈ ಸಂಕಲನದ ಹತ್ತು ಕಥೆಗಳು ಓದುಗರಲ್ಲಿ ಖಂಡಿತ ಕುತೂಹಲ ಮೂಡಿಸುತ್ತವೆ ಎಂದು ಹೇಳಿದರು.

​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ.ವಿ.ವಿ. ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಮಹಿಳೆಯರ ಸಾಹಿತ್ಯವನ್ನು ಕೇವಲ ‘ಅಡುಗೆ ಮನೆ ಸಾಹಿತ್ಯ’ ಎಂದು ಪರಿಗಣಿಸದೆ ಮೌಲಿಕ ದೃಷ್ಟಿಯಿಂದ ನೋಡಬೇಕು. ಸಾಹಿತ್ಯವನ್ನು ಮಹಿಳಾ ಅಥವಾ ಪುರುಷ ಸಾಹಿತ್ಯ ಎಂದು ಪ್ರತ್ಯೇಕಿಸುವುದು ಸರಿಯಲ್ಲ. ಈ ಸಂಕಲನದ ಕಥೆಗಳು ಯಾವುದೇ ಕಾದಂಬರಿಗೂ ಕಡಿಮೆ ಇಲ್ಲದಂತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಕಲನದ ಸಂಪಾದಕ ಡಾ. ಬಸವರಾಜ ಸಾದರ ಅವರು ತಮ್ಮ ತಾಯಿಯ ಸ್ಮರಣಾರ್ಥ ಈ ಕೃತಿಯನ್ನು ಸಿದ್ಧಪಡಿಸಿರುವ ಕುರಿತು ಮಾತನಾಡಿದರು.

​ವೇದಿಕೆಯಲ್ಲಿ ಪ್ರಿ. ಶಶಿಧರ ತೋಡಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ತುರಮರಿ ಸ್ವಾಗತಿಸಿದರೆ, ವೀರಣ್ಣ ಒಡ್ಡೀನ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸಂಜೀವ ಕುಲಕರ್ಣಿ, ಬಸವಪ್ರಭು ಹೊಸಕೇರಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಡಾ. ತೇಜಸ್ವಿ ಕಟ್ಟೀಮನಿ, ಡಾ. ಕೆ.ಆರ್.ದುರ್ಗಾದಾಸ, ಡಾ. ಮೃತ್ಯುಂಜಯ ಶೆಟ್ಟರ, ಡಾ. ಪ್ರಕಾಶ ಭಟ್ ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *