ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಬದಲಾವಣೆಗಾಗಿ ಜೆಡಿಯು ಬೆಂಬಲಿಸಿ: ಶ್ರೀಶೈಲಗೌಡ ಕಮತರ ಕರೆ

Spread the love

ಧಾರವಾಡ: ನಗರದ ಶ್ರೀನಗರದಲ್ಲಿ ಇತ್ತೀಚೆಗೆ ಜೆಡಿಯು ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಜೆಡಿಯು ಜಿಲ್ಲಾ ಅಧ್ಯಕ್ಷರಾದ ಶ್ರೀಶೈಲಗೌಡ ಕಮತರ ಅವರು ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಲು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಾರ್ವಜನಿಕರು ಜೆಡಿಯು ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

​ಜೆಡಿಯು ಪಕ್ಷವು ಪ್ರಜಾಪ್ರಭುತ್ವ ಹಾಗೂ ಸಮಾಜವಾದಿ ತಳಹದಿಯ ಮೇಲೆ ಭಾರತವನ್ನು ಕಟ್ಟಲು ಗಾಂಧಿ ತತ್ವ ಮತ್ತು ಮೌಲ್ಯಗಳನ್ನು ಪಾಲಿಸುತ್ತಾ ಬಂದಿದೆ. ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ಸ್ಪೂರ್ತಿ ಪಡೆದು, ಪ್ರತಿಯೊಬ್ಬ ನಾಗರಿಕನು ಸ್ವತಂತ್ರ ಹಾಗೂ ಗೌರವಯುತ ಜೀವನ ನಡೆಸುವಂತಾಗಲು ಪಕ್ಷ ಹೋರಾಡುತ್ತಿದೆ. ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಅನ್ಯ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಜನರ ಆಶೋತ್ತರಗಳನ್ನು ನಿರ್ಲಕ್ಷಿಸುತ್ತಿವೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

​ರಾಜ್ಯ ಮತ್ತು ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಚುನಾಯಿತ ಪ್ರತಿನಿಧಿಗಳು ಇಲ್ಲದಿದ್ದರೂ, ಜೆಡಿಯು ಪಕ್ಷವು ರೈತರು, ಮಹಿಳೆಯರು, ಕಾರ್ಮಿಕರು, ಶೋಷಿತ ವರ್ಗದವರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರ ಸಮಸ್ಯೆಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದೆ. ಜನರ ಭಾವನೆಗಳಿಗೆ ಗೌರವ ನೀಡಿ ಹೋರಾಟ ಮಾಡುತ್ತಿರುವ ಪಕ್ಷದ ಸದಸ್ಯತ್ವವನ್ನು ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು. ಆ ಮೂಲಕ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಕೈಜೋಡಿಸಬೇಕೆಂದು ಅವರು ಕೋರಿದರು.

​ಕಾರ್ಯಕ್ರಮದಲ್ಲಿ ಪಕ್ಷದ ಪದಾಧಿಕಾರಿಗಳಾದ ಫಿರೋಜಖಾನ್ ಹವಾಲ್ದಾರ, ಓಂಸಂಗಮೇಶ ಐಹೊಳೆ, ಪರಶುರಾಮ ಮೂಲಿಮನಿ, ನಿಂಗರಡ್ಡಿ ಕುರ್ತಕೋಟಿ, ಸಿದ್ದಪ್ಪ ದೊಡಮನಿ, ಸಯ್ಯದ ಮಕಾನದಾರ, ಮಲ್ಲವ್ವ ದೊಡಮನಿ, ಶಿವಾನಂದ ಅಮರಶೆಟ್ಟಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *