
ಹನೂರು: ತಾಲೂಕಿನ ವಡಕೆಹಳ್ಳದಲ್ಲಿ ಕಾವೇರಿ ನದಿಯಿಂದ ದಂಟಳ್ಳಿ ಏತನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟಳ್ಳಿ ಏತನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಯು ಗುರುವಾರ 131ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟದ ಕಾವು ದಿನೇ ದಿನೇ ತೀವ್ರಗೊಳ್ಳುತ್ತಿದೆ.
ಕಳೆದ 2025ರ ಅಕ್ಟೋಬರ್ 27ರಿಂದಲೂ ಈ ಭಾಗದ ರೈತರು, ಮಹಿಳೆಯರು ಹಾಗೂ ಮಕ್ಕಳು ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ಅಂತರ್ಜಲ ಅಭಿವೃದ್ಧಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸತತವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ 130 ದಿನಗಳು ಕಳೆದರೂ ಸರ್ಕಾರವಾಗಲಿ ಅಥವಾ ಸ್ಥಳೀಯ ಜನಪ್ರತಿನಿಧಿಗಳಾಗಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಶಾಸಕರು ರೈತರ ಮಧ್ಯೆ ಒಡಕು ಮೂಡಿಸುವ ಮೂಲಕ ‘ಹೊಡೆದು ಆಳುವ ನೀತಿ’ ಅನುಸರಿಸುತ್ತಿದ್ದಾರೆ ಹಾಗೂ ಈ ಭಾಗದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಧರಣಿನಿರತರು ಗಂಭೀರವಾಗಿ ಆರೋಪಿಸಿದ್ದಾರೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಈ ಹಿಂದೆ ಯೋಜನೆಯ ಡಿಪಿಆರ್ (ವಿವರವಾದ ಯೋಜನಾ ವರದಿ) ಸಿದ್ಧಪಡಿಸಲು ಸೂಚನೆ ನೀಡುವುದಾಗಿ ಭರವಸೆ ನೀಡಿದ್ದರೂ, ಅದು ಇದುವರೆಗೂ ಕಾರ್ಯಗತಗೊಂಡಿಲ್ಲ. ಇದರಿಂದ ಬೇಸತ್ತಿರುವ ರೈತರು, ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿ ತಾವೇ ಯೋಜನೆಯ ಸಂಪೂರ್ಣ ವೆಚ್ಚ ಭರಿಸಿಯಾದರೂ ಬರಗಾಲವನ್ನು ನೀಗಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಸರ್ಕಾರ ಸೂಕ್ತ ಸಹಕಾರ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಹೋರಾಟಗಾರರಾದ ಆರ್. ಅರ್ಪುದರಾಜ್, ಪೌಲ್ ಧರ್ಮ ರಾಜ್, ಜಾನ್ ಪಾಲ್, ಮಲ್ಲೇಶ್, ಚಂದ್ರಪ್ಪ, ಬಸವಣ್ಣ, ಬಸವರಾಜಪ್ಪ ಹಾಗೂ ಮಹಿಳಾ ಮುಖಂಡರಾದ ಮಣಿಮಲ್ಲಮ್ಮ, ಗಾಂಧಮ್ಮ, ಮಹದೇವಮ್ಮ, ಪಾರ್ವತಿಯಮ್ಮ, ರತ್ನಮ್ಮ ಸೇರಿದಂತೆ ದಂಟಳ್ಳಿ ಗ್ರಾಮದ ನೂರಾರು ನಾಗರಿಕರು ಭಾಗವಹಿಸಿದ್ದರು.

