
ಧಾರವಾಡ: ಸರ್ಕಾರದ ಆಶಯದಂತೆ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ಗ್ಯಾರಂಟಿ ಯೋಜನೆಗಳ ಲಾಭ ಯಾವುದೇ ವಿಳಂಬವಿಲ್ಲದೆ ತಲುಪಬೇಕು. ವಿಶೇಷವಾಗಿ ಕುಟುಂಬದ ಜವಾಬ್ದಾರಿ ಹೊತ್ತಿರುವ ಮಹಿಳೆಯರ ಶ್ರಮಕ್ಕೆ ಗೌರವ ನೀಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಧಾರವಾಡ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅರವಿಂದ ಏಗನಗೌಡರ ತಿಳಿಸಿದರು.
ತಾಲೂಕಿನ ಮರೆವಾಡ ಹಾಗೂ ಕರಡಿಗುಡ್ಡ ಗ್ರಾಮ ಪಂಚಾಯತಿಗಳಲ್ಲಿ ಶನಿವಾರ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರ ಸೇವೆಗಾಗಿ ಸರ್ಕಾರ ಬದ್ಧವಾಗಿದ್ದು, ಸೌಲಭ್ಯಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪುವಂತಾಗಬೇಕು. ಯೋಜನೆಗಳ ಲಾಭ ಪಡೆಯಲು ಫಲಾನುಭವಿಗಳಿಗೆ ಯಾವುದೇ ತಾಂತ್ರಿಕ ತೊಂದರೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಹಂತದಲ್ಲೂ ವಿಳಂಬ ಧೋರಣೆ ತೋರದೆ ಕೆಲಸ ಮಾಡುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದ ಅಧ್ಯಕ್ಷರು, ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು. ಜನರ ದೂರುಗಳನ್ನು ತಾಳ್ಮೆಯಿಂದ ಆಲಿಸಿ, ಬಾಕಿ ಇರುವ ಅರ್ಜಿಗಳನ್ನು ತಕ್ಷಣವೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಭೆಯಲ್ಲಿ ತಾಲೂಕಾ ಸಮಿತಿಯ ಸದಸ್ಯರಾದ ಚಂದ್ರಶೇಖರ ಕದಂ, ಸಿದ್ದಪ್ಪ ಹಳ್ಳಿಗೇರಿ, ಕಲಾವತಿ ಭೀಮಕ್ಕನವರ, ರಾಜೇಶ ಚವ್ಹಾಣ ಹಾಗೂ ಕಾರ್ತೀಕ ಗೋಕಾಕ ಉಪಸ್ಥಿತರಿದ್ದರು. ಮರೆವಾಡ ಗ್ರಾಮ ಪಂಚಾಯತ ಆಡಳಿತಾಧಿಕಾರಿ ಈಶ್ವರ ಎಂ.ಆಯಟ್ಟಿ, ಪಿಡಿಓ ಮಲ್ಲಿಕಾರ್ಜುನ್ ಕೋಯಪ್ಪನವರ, ಕರಡಿಗುಡ್ಡ ಗ್ರಾಮ ಪಂಚಾಯತ ಆಡಳಿತಾಧಿಕಾರಿ ವರುಣ ಅಮ್ಮಿನಗಡ, ಪಿಡಿಓ ತನ್ವೀರ್ ಡಿ. ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

